ಎಚ್‌ಐವಿ ಕೊನೆಗಾಣಿಸಲು ಜಾಗೃತಿ ಅವಶ್ಯಕ
ತಾಳಿಕೋಟೆ02: ಎಚ್‌ಐವಿಯನ್ನು ಕೊನೆಗಾಣಿಸಬೇಕಾದರೆ ಜನಜಾಗೃತಿ ಅವಶ್ಯಕವಾಗಿದೆ. ಎಚ್‌ಐವಿಯನ್ನು ಆರಂಭಿಕ ಹಂತದಲ್ಲೆ ಗುರುತಿಸಿದಾಗ ಮಾತ್ರ ಸೊಂಕಿತರು ತಮ್ಮ ಜೀವೀತಾವಧಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿ, ತಹಶೀಲ್ದಾರ ಶ್ರೀಧರ ಗೋಟೋರ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ವಿಜಯಪುರ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಳಿಕೋಟೆ, ವಿಕಾಸ ಗ್ರಾಮೀಣ ಅಭಿವೃದ್ಧಿ ಹಾಗೂ ವಿದ್ಯಾವರ್ಧಕ ಸಂಸ್ಥೆ ತಾಳಿಕೋಟೆ ಮತ್ತು ಐ.ಸಿ.ಟಿ.ಸಿ. ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮುದಾಯ ಆಧಾರಿತ ಎಚ್‌ಐವಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಎಚ್‌ಐವಿ ಬಾಧಿತರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರು ತಪಾಸಣೆಗೊಳಪಡಬೇಕು. ಅಂದಾಗ ಮಾತ್ರ ಸೂಕ್ತ ಚಿಕಿತ್ಸೆ ಲಭ್ಯವಾಗಲಿದೆ. ಎಪಿಎಮ್‌ಸಿ ಅಡಿಯಲ್ಲಿ ಕೆಲಸ ಮಾಡುವಂತಹ ಹಮಾಲರು, ದಿನಗೂಲಿ ನೌಕರರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಮ್.ಬಿ.ಬಿರಾದಾರ ಮಾತನಾಡಿ, 2030ರೊಳಗೆ ಭಾರತದಲ್ಲಿ ಏಡ್ಸ್ ರೋಗವನ್ನು ಹೊಡೆದೊಡಿಸಬೇಕಾಗಿದೆ. ಅದಕ್ಕಾಗಿ ಜನರಲ್ಲಿ ಜಾಗೃತಿ ಕಾರ್ಯಕ್ರಮ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯಲ್ಲಿ ಎಚ್.ಐ.ವಿ. ಸೋಂಕಿತರು ಹೆಚ್ಚಿನ ಜನರಿದ್ದು, ಈ ರೋಗದ ಬಗ್ಗೆ ಜಾಗೃತಿ, ತಪಾಸಣೆ ಕಾರ್ಯಕ್ರಮವನ್ನು ಸಮಾರೋಪಾದಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಎಸ್.ಬಿ.ಪಾಟೀಲ ಎನ್.ಸಿ.ಡಿ ವೈಧ್ಯಾಧಿಕಾರಿ ಡಾ.ನಿಂಗರಾಜ ದ್ಯಾಪೂರ, ವಿಕಾಸ ಗ್ರಾಮೀಣ ಅಭಿವೃದ್ಧಿ ಹಾಗೂ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಎ.ಬಿ.ದೇಸಾಯಿ, ಎನ್‌ಟಿಪಿ, ಎನ್‌ಸಿಡಿ. ಮಲೇರಿಯಾ, ಅಬಾಕಾರ್ಡ ವಿಭಾಗದ ಸಿಬ್ಬಂದಿ ವರ್ಗದವರು ಶಿಬಿರದಲ್ಲಿ ಭಾಗವಹಿಸಿದರು.
ಐಸಿಟಿಸಿ ಆಪ್ತ ಸಮಾಲೋಚಕಿ ಕಲ್ಪನಾ ಹೂಗಾರ ನಿರೂಪಿಸಿದರು. ಎನ್.ಸಿ.ಡಿ. ಆಪ್ತ ಸಮಾಲೋಚಕಿ ಸಿದ್ದಮ್ಮ ಬ್ಯಾಲ್ಯಾಳ ವಂದಿಸಿದರು.