ವಿಜಯಪುರ

ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ

ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ

ಲೋಕದರ್ಶನ ವರದಿ 

  ವಿಜಯಪುರ 10 : ನಗರದ ವಿ. ಭ. ದರಬಾರ ಶಾಲೆಯಲ್ಲಿ ದಿನಾಂಕ 10-09-2026 ರಂದು ಇನ್ನರ್‌ವೀಲ್ ಕ್ಲಬ್ ಹಾಗೂ ವಿ. ಭ. ದರಬಾರ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣೇಶ ಉತ್ಸವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.  ಕಾರ್ಯಕ್ರಮದ ಮುಖ್ಯ ಅಥಿತಿಸ್ಥಾನದಿಂದ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಶ್ರೀಯುತ ವೀರೇಶ ಇವರು ಪ್ಲಾಸ್ಟರ್ ಆಫ್ ಪ್ಯಾರಿಸ್‌ದಿಂದ ತಯಾರಿಸಿದ ಗಣೇಶನ ವಿಗ್ರಹದ ಬದಲು ಮಣ್ಣಿನ ಗಣಪನನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಲು ಕರೆ ನೀಡಿದರು. ಅಲ್ಲದೆ ಮದ್ದು ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. 

ಕಾರ್ಯಕ್ರಮದ ಗೌರವ ಉಪಸ್ಥಿತ ಸ್ಥಾನದಿಂದ ಮಾತನಾಡಿದ ವಿ. ಭ. ದರಬಾರ ಪ್ರೌಢ ಶಾಲೆಯ ಉಪಪ್ರಾಂಶುಪಾಲರಾದ ಶ್ರೀ ವ್ಹಿ. ಕೆ. ಗುಜರಿ ಇವರು ಇರುವುದೊಂದೆ ಭೂಮಿ ಅದರ ಘಟಕಗಳ ಮಾಲಿನ್ಯ ಜೀವ ಸಂಕುಲದ ವಿನಾಶ ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಪರಿಸರ ಸಂರಕ್ಷಣೆಯ ಕುರಿತು ಸಮಗ್ರ ಮಾಹಿತಿ ಒದಗಿಸಿದರು.  ಇದೇ ಸಂದರ್ಭದಲ್ಲಿ ದರಬಾರ ಪ್ರೌಢ ಶಾಲೆಯ ಇಕೊ-ಕ್ಲಬ್ ಮುಖ್ಯಸ್ಥೆ ಶ್ರೀಮತಿ ಜಯಶ್ರೀ ಪಾಟೀಲ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಜಾಗೃತಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳ ಜ್ಞಾನಸಿಂಚನ ಮಾಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ   ಸುಖಲತಾ ಇವರು ಸಮಸ್ತ ವಿದ್ಯಾರ್ಥಿವೃಂದಕ್ಕೆ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಮಾರಂಭದಲ್ಲಿ ಇನ್ನರ್‌ವೀಲ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ   ಪಲ್ಲವಿ ಎ. ದರಬಾರ ಮತ್ತು ದರಬಾರ ಸಂಸ್ಥೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ