ಗದಗ

ಎಚ್‌ಐವಿ, ಏಡ್ಸ್‌ ಕುರಿತು ಯುವಜನರಲ್ಲಿ ಜಾಗೃತಿ ಅಗತ್ಯ

ಎಚ್‌ಐವಿ, ಏಡ್ಸ್‌ ಕುರಿತು ಯುವಜನರಲ್ಲಿ ಜಾಗೃತಿ ಅಗತ್ಯ

ಲೋಕದರ್ಶನ ವರದಿ  

ಹುಲಕೋಟಿ (ಗದಗ), ಸೆ. 22: ಯುವಜನರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸಮಾಜದಲ್ಲಿಯೂ ಎಚ್‌ಐವಿ ಕುರಿತು ಅರಿವು ಮೂಡಿಸಬೇಕು ಎಂದು ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಎನ್‌. ಹಂಜೆ ಹೇಳಿದರು.  

ಕಾಲೇಜಿನ ಯುವ ರೆಡ್ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕ, ಆಂತರಿಕ ಗುಣಮಟ್ಟ ಭರವಸೆ ಕೋಶ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಕರ್ನಾಟಕ ಏಡ್ಸ್‌ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ‘ನಿಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ’ ಎಂಬ ಆಶಯದೊಂದಿಗೆ ‘ಮೊಬಿಲೈಸೇಷನ್ ಫಾರ್ ಏಡ್ಸ್‌ ಸುರಕ್ಷಾ ನಿ್ತ್ಖ್ಣೌೂಹಿ2026' ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಅಪ್ಪಣ್ಣ ಎನ್‌. ಹಂಜೆ, ವಿದ್ಯಾರ್ಥಿ ಯುವಜನತೆಯಲ್ಲಿ ಎಚ್‌ಐವಿ ಮತ್ತು ಏಡ್ಸ್‌ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು ಅಗತ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.  

ಯುವ ರೆಡ್ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕದ ಕಾರ್ಯಕ್ರಮ ಅಧಿಕಾರಿ ಭೀಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಎಚ್‌ಐವಿ/ಏಡ್ಸ್‌ ಕುರಿತು ಇರುವ ತಪ್ಪು ಕಲ್ಪನೆ, ಭಯ ಹಾಗೂ ಕಳಂಕದ ಮನೋಭಾವವನ್ನು ನಿವಾರಿಸಲು ವೈಜ್ಞಾನಿಕ ಮಾಹಿತಿಯ ಅಗತ್ಯವಿದೆ ಎಂದರು.  

ಸೋಂಕಿತರೊಂದಿಗೆ ಹಸ್ತಲಾಘವ ಮಾಡುವುದರಿಂದ ಅಥವಾ ಒಟ್ಟಿಗೆ ಊಟ ಮಾಡುವುದರಿಂದ ಎಚ್‌ಐವಿ ಹರಡುವುದಿಲ್ಲ. ಆದ್ದರಿಂದ ‘ರೋಗದ ವಿರುದ್ಧ ಹೋರಾಡೋಣ, ರೋಗಿಯ ವಿರುದ್ಧ ಅಲ್ಲ’ ಎಂಬ ಮನೋಭಾವದೊಂದಿಗೆ ಸೋಂಕಿತರಿಗೆ ಮಾನವೀಯ ಬೆಂಬಲ ನೀಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಕೇವಲ ಮಾಹಿತಿ ಪಡೆದುಕೊಳ್ಳುವುದಕ್ಕೆ ಸೀಮಿತವಾಗದೆ ತಮ್ಮ ಗ್ರಾಮ ಹಾಗೂ ನೆರೆಹೊರೆಯ ಪ್ರದೇಶಗಳಲ್ಲಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.  


ಸುದ್ದಿ ಓದಿ