ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಜಾಗೃತಿ ಕಾರ್ಯಕ್ರಮ
ಮಾನಸಿಕ ಖಿನ್ನತೆಗೊಳಗಾದವರನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದ್ದಲ್ಲಿ ಗುಣಮುಖ: ಡಾ. ವೀರೇಂದ್ರ ಕುಮಾರ್
ಬಳ್ಳಾರಿ 13: ವ್ಯಕ್ತಿಯಲ್ಲಿ ಪದೇ ಪದೇ ಬರುವ ತೀವ್ರತರವಾದ ಆಲೋಚನೆಗಳಿಂದ ಮತ್ತು ಜೀವನದಲ್ಲಿ ಬರುವ ಒತ್ತಡಗಳಿಂದ ಮಾನಸಿಕ ಸ್ಥಿತಿಯ ಮೇಲೆ ಒತ್ತಡ ಬೀಳುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದವರು ಋಣಾತ್ಮಕ ಭಾವನೆಗಳಿಂದ ಕೂಡಿರುತ್ತಾರೆ. ಜೀವನದ ಬಗ್ಗೆ ನಿರಾಸೆ, ಆತಂಕ, ಜಿಗುಪ್ಸೆ ಎಂಬ ಭಾವನೆಗಳಿಂದ ಕೂಡಿರುತ್ತಾರೆ, ಇಂಥಹ ಸಂದರ್ಭದಲ್ಲಿ ಅವರನ್ನು ಆದಷ್ಠು ಬೇಗ ಗುರುತಿಸಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ರವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಸರ್ಕಾರಿ ಪದವಿ ಪೂರ್ವ ಮುನ್ಸಿಪಲ್ ಕಾಲೇಜಿನಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ 15-25 ವಯಸ್ಸಿನ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಖಿನ್ನತೆ ಬರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಎದೆಗುಂದದೇ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬರಬಾರದು. ಒಂದು ವೇಳೆ ಆ ರೀತಿಯ ಸಕಾರಾತ್ಮಕ ಭಾವನೆಗಳಿಗೆ ತೊಂದರೆಯಾದರೆ ಮತ್ತು ಮಾನಸಿಕ ಕಿರಿಕಿರಿ ಆದರೆ ಅದಷ್ಟು ಬೇಗ ಮನೋವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.
ಮನೋರೋಗ ತಜ್ಞರಾದ ಡಾ.ಭುವನೇಶ್ವರಿ ದೇವಿ ಅವರು ಮಾತನಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳ ಮಂಗಳವಾರದಂದು ಎಲ್ಲಾ ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಮಾನಸಿಕ ರೋಗಿಗಳಿಗೆ, ಸಣ್ಣ ಪುಟ್ಟ ಮಾನಸಿಕ ತೊಂದರೆಗಳಿಗೆ ಅಪ್ತಸಮಾಲೋಚನೆ ಹಾಗೂ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಪ್ರತಿಯೊಬ್ಬರು ಇದರ ಸದುಪಯೊಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಬೇಕು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟರಾಮರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಎನ್.ಎಸ್.ಎಸ್ ಅಧಿಕಾರಿಗಳಾದ ಶಾಂತಕುಮಾರ್, ರಂಜಿತ, ಅಬ್ದುಲ್ಲಾ ಡಿ, ಯೆಶೋಪ್ ಕುಮಾರ್, ಕ್ರಿಷ್ಣ, ರಮೇಶ್ ಬಾಬು, ರಾಮು ಹಾಗೂ ಇತರರು ಉಪಸ್ಥಿತರಿದ್ದರು.