ದುಶ್ಚಟಕ್ಕೆ ದಾಸರಾಗಿರುವ ವ್ಯಕ್ತಿಗಳನ್ನು ಅದರಿಂದ ಮುಕ್ತಗೊಳಿಸುವಂತೆ ಜಾಗೃತಿ
ಮುಂಡರಗಿ16: ಹಾರೋಗೇರಿ ಗ್ರಾಮದಲ್ಲಿ ವಿವಿಧ ಮಠಾದೀಶರು ಸದ್ಭಾವನಾ ಯಾತ್ರೆಯ ಮೂಲಕ ಮನೆ ಮನೆಗೆ ಬೇಟಿ ನೀಡಿ ದುಶ್ಚಟಗಳ ಭಿಕ್ಷೆಯ ಜೋಳಿಗೆ ಹಿಡಿದುಕೊಂಡು ಸಂಚರಿಸಿದರು.
ಹಾನಗಲ್ ಗುರುಕುಮಾರ ಶಿವಯೋಗಿಗಳ 157ನೇ ಜಯಂತಿ ಪ್ರಯುಕ್ತ ಹತ್ತು ದಿನಗಳ ಕಾಲ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸದ್ಭಾವನಾ ಯಾತ್ರೆಯ ಮೂಲಕ ಸೋಮವಾರ ಮನೆ ಮನೆಗೆ ಬೇಟಿ ನೀಡಿ ಹಾನಗಲ್ ಕುಮಾರ ಶಿವಯೋಗಳವರ ಜೀವನ ಚರಿತ್ರೆ ಕುರಿತು ಹಾಗೂ ದುಶ್ಚಟಕ್ಕೆ ದಾಸರಾಗಿರುವ ವ್ಯಕ್ತಿಗಳನ್ನು ಅದರಿಂದ ಮುಕ್ತಗೊಳಿಸುವಂತೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಜಗದ್ಗುರು ಅನ್ನದಾನೀಶ್ವರ ಮಠದಿಂದ ಬೆಳಿಗ್ಗೆ 6 ಗಂಟೆಗೆ ಸಾಗಿದ ಈ ಸದ್ಭಾವನಾ ಯಾತ್ರೆ ಪಟ್ಟಣದ ದೋಸಿಗೇರಿ ಓಣಿಯಿಂದ ಅಂಬೇಡ್ಕರ್ ನಗರ, ರಣದಾಂಬಿಕೆ ದೇವಸ್ಥಾನ ಹಾಗೂ ಜಾಗೃತ್ ಸರ್ಕಲ್ ಮಾರ್ಗವಾಗಿ ಮಂಜುನಾಥ ದೇವಸ್ಥಾನದವರೆಗೆ ತೆರಳಿ, ಸ್ವಲ್ಪ ಹೊತ್ತು ಎಲ್ಲಾ ಸ್ವಾಮೀಜಿಗಳು ದೇವಸ್ಥಾನದಲ್ಲಿಯೇ ಕುಳಿತು ಹಾನಗಲ್ ಕುಮಾರ ಶಿವಯೋಗಿಗಳ ಸಮಾನತೆಯ ಗುಣಗಳು ಹಾಗೂ ಯುವಕರು ಆದ್ಯಾತ್ಮದ ಮಾರ್ಗದೆಡೆಗೆ ಸಾಗಬೇಕೆಂಬ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಲಾಯಿತು.
ನಂತರ ತಾಲೂಕಿನ ಹಾರೋಗೇರಿ ಮತ್ತು ಹಿರೇವಡ್ಡಟ್ಟಿ ಗ್ರಾಮಕ್ಕೆ ವಿವಿದ ಮಠಾದೀಶರು ಸದ್ಭಾವನಾ ಯಾತ್ರೆಯ ಮೂಲಕ ಮನೆ ಮನೆಗೆ ಬೇಟಿ ನೀಡಿ, ಹಾನಗಲ್ ಕುಮಾರ ಶಿವಯೋಗಳವರ ಜೀವನ ಚರಿತ್ರೆ ಕುರಿತು ಅರಿವು ಮೂಡಿಸಿ, ದುಶ್ಚಟಗಳ ಭಿಕ್ಷೆಯ ಜೋಳಿಗೆ ಹಿಡಿದುಕೊಂಡು ಸಂಚರಿಸಿ, ಅವರೊಂದಿಗೆ ಮಾತುಕತೆ ನಡೆಸಿ ಅದನ್ನು ಬಿಡಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜ.ಅನ್ನದಾನೀಶ್ವರ ಮಠದ ಉತ್ತರಾದಿಕಾರಿ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಚನ್ನಮಲ್ಲ ಮಹಾಸ್ವಾಮಿಗಳು, ವಾಗೀಶ ಪಂಡಿತಚಾರ್ಯರರು, ನಿರಂಜನದೇವರು, ಚನ್ನಬಸವ ದೇವರು, ಶಿವಾನಂದ ದೇವರು, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಡಾ.ಬಿ.ಜಿ.ಜವಳಿ, ಮಂಜುನಾಥ ಮುಧೋಳ, ಹಾಲಯ್ಯ ಹಿರೇಮಠ ಸೇರಿದಂತೆ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು.