ಬಳ್ಳಾರಿ

ಕ್ಷತ್ರಿಯರು ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆ ಖಂಡಿಸದಿರುವುದು ಶೋಚನೀಯ: ಶಿವಾಜಿರಾವ್

ಕ್ಷತ್ರಿಯರು ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆ ಖಂಡಿಸದಿರುವುದು ಶೋಚನೀಯ: ಶಿವಾಜಿರಾವ್

ಬಳ್ಳಾರಿ 19: ವಿಜಯನಗರ ಕ್ಷೇತ್ರದ ಶಾಸಕರಾಗಿದ್ದ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆದರೂ ಆಗ ಕ್ಷತ್ರಿಯರು ಖಂಡಿಸದಿರುವುದು ಶೋಚನೀಯ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಮುಖಂಡ ಎಂ.ಶಿವಾಜಿರಾವ್ ವಿಷಾದ ವ್ಯಕ್ತಪಡಿಸಿದರು. 

ಕೌಲ್‍ಬಜಾರ್ ಶ್ರೀಪಾಂಡುರಂಗ ದೇವಸ್ಥಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಬಹು ದೊಡ್ಡ ಸಮಾಜ. ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಇದೆ. ನಗರವೊಂದರಲ್ಲಿಯೇ 20 ಸಾವಿರ ಜನರಿದ್ದಾರೆ. ಕ್ಷತ್ರಿಯ ತೇಜಸ್ಸು ಪುರಾಣ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಸಂಘಟನೆಯ ಕೊರತೆಯಿಂದ ಸಮಾಜ ಬಹಳಷ್ಟು ಅವಕಾಶಗಳಿಂದ ವಂಚಿತವಾಗಿದೆ. ಕ್ಷತ್ರಿಯ ಸಮಾಜದ 36 ಪಂಗಡಗಳು ಒಗ್ಗೂಡಿದಾಗ ಮಾತ್ರ ಇನ್ನಷ್ಟು ಬಲ ಬರಲು ಸಾಧ್ಯ. ಈ ಹಿಂದೆ ಶ್ರೀಹರಿ ಎಲ್.ಖೋಡೆ ಅವರು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದರು. ನಂತರ ರಾಜಕೀಯ ಪ್ರವೇಶಿಸಿ ಪಂಗಡಗಳು ಒಡೆಯಲು ಕಾರಣವಾಯಿತು. ಆ ತಪ್ಪಿನ ಅರಿವಾಗಿ ಇದೀಗ ಈ ದಿಸೆಯಲ್ಲಿ ಕೆಕೆಓ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಎಲ್ಲ ಕ್ಷತ್ರಿಯರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರು ಸಹ ಎಚ್ಚೆತ್ತುಕೊಂಡು ಇತರೆ ಸಮುದಾಯಗಳ ಜೊತೆಗೆ ಪ್ರೀತಿ, ವಿಶ್ವಾಸ, ಭ್ರಾತೃತ್ವದೊಂದಿಗೆ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಹಿರಿಯ ಮುಖಂಡರಾದ ಕೃಷ್ಣಮೂರ್ತಿ ರಂಗರೇಜ್ ಮಾತನಾಡಿ, ನಗರವೊಂದರಲ್ಲಿಯೇ ಕ್ಷತ್ರಿಯ ಸಮುದಾಯದ 12 ಪಂಗಡಗಳು ಇವೆ. 

ಕೆಕೆಓ ಜಿಲ್ಲಾ ಸಂಚಾಲಕ ವಿನೋದ್ ಎಂ.ಚವ್ವಾಣ್, ಮರಾಠಾ ಸಿಳ್ಳೆಕ್ಯಾತ ಸಮುದಾಯದ ಸುಬ್ಬಣ್ಣ ಸೇರಿದಂತೆ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇವೇಳೆ ಕ್ಷತ್ರಿಯ ಸಮುದಾಯದಿಂದ ರಚಿತಗೊಂಡ ದಿನದರ್ಶಿಕೆ ಹಾಗೂ ಕ್ಷತ್ರಿಯ ಸ್ಟಿಕರ್ ಬಿಡುಗಡೆಗೊಳಿಸಲಾಯಿತು.

ಭಾವಸಾರ ಕ್ಷತ್ರಿಯ, ಸೋಮವಂಶ ಕ್ಷತ್ರಿಯ, ಖಾಟಿಕ್, ಗೋಂಧಳಿ, ಎಸ್‍ಎಸ್‍ಕೆ ಸಮುದಾಯ ಸೇರಿದಂತೆ ನಗರದಲ್ಲಿನ 12 ಪಂಡಗಳ ಮುಖಂಡರಾದ ನಾಗರಾಜರಾವ್ ಚವ್ವಾಣ್, ರಮೇಶರಾವ್, ಸುರೇಶರಾಜ್, ಶಂಕರ್, ಅರುಣ್ ಕುಮಾರ್, ರಾಜೇಶ್, ಶ್ರೀನಿವಾಸ್, ಯಶವಂತ, ರಾಹುಲ್, ಕಿಶನ್, ವಸಂತ್, ಬಾಲಾಜಿರಾವ್, ವೀರಣ್ಣ ಇನ್ನಿತರರು ಇದ್ದರು.

ಸುದ್ದಿ ಓದಿ