ವಿಜಯಪುರ

ಗುಂಡಕನಾಳ ಶಾಂತಿ ಸಭೆಯಲ್ಲೂ ದೌರ್ಜನ್ಯ: ತಕ್ಷಣ ಕ್ರಮಕ್ಕೆ ಆಗ್ರಹ

ಗುಂಡಕನಾಳ ಶಾಂತಿ ಸಭೆಯಲ್ಲೂ ದೌರ್ಜನ್ಯ: ತಕ್ಷಣ ಕ್ರಮಕ್ಕೆ ಆಗ್ರಹ

ವಿಜಯಪುರ  22: ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ದಿ. 05-08-2026ರಂದು ಸೈದಪ್ಪ ಮುತ್ಯಾನ ಜಾತ್ರೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಶಿವಪುತ್ರ, ಮಲ್ಲು ಸೇರಿದಂತೆ ಹಲವರ ಮೇಲೆ ಸವರ್ಣೀಯರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದ ಘಟನೆ ಬಳಿಕ ಸೌಹಾರ್ದತೆ ಮರುಸ್ಥಾಪಿಸಲು ಅಧಿಕಾರಿಗಳು ಆಯೋಜಿಸಿದ್ದ ಶಾಂತಿ ಸಭೆಯೂ ಆತಂಕದ ವಾತಾವರಣದಲ್ಲೇ ನಡೆದಿದೆ ಎಂದು ಸಂತ್ರಸ್ತ ಗ್ರಾಮಸ್ಥರು ಆರೋಪಿಸಿದ್ದಾರೆ.  

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ, ಡಿ.ಸಿ.ಆರ್‌.ಇ. ಎಸ್ಪಿ ಸಂತೋಷ ಜುಂಜರವಾಡ್, ಉಪವಿಭಾಗಾಧಿಕಾರಿ ಗುರುನಾಥ್ ದಡ್ಡೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅನೂಸೊಯ ಚಲುವಾದಿ, ಪಿಎಸ್‌ಐ ಜ್ಯೋತಿ ಕೋಟ ಹಾಗೂ ಗ್ರಾ.ಪಂ. ಅಧಿಕಾರಿ ಅನಿಲ್ ಬಿರಾದಾರ ಅವರ ಸಮ್ಮುಖದಲ್ಲೇ ಗ್ರಾಮದಲ್ಲಿನ ಹಲವು ಸಮಸ್ಯೆಗಳು ಬೆಳಕಿಗೆ ಬಂದಿವೆ.  

ಶಾಂತಿ ಸಭೆ ನಡೆದ ಸ್ಥಳದ ದೇವಸ್ಥಾನಕ್ಕೆ ಬೀಗ ಹಾಕಿರುವುದು, ಸಂಸದರ ನಿಧಿಯಿಂದ ನಿರ್ಮಿಸಲಾದ ಸಾರ್ವಜನಿಕ ಸಮುದಾಯ ಭವನವನ್ನು ಅಕ್ರಮವಾಗಿ ವಶಪಡಿಸಿಕೊಂಡು ಗೋದಾಮಾಗಿ ಬಳಸುತ್ತಿರುವುದು, ಅಂಗನವಾಡಿ ಕಟ್ಟಡವನ್ನು ಖಾಸಗಿ ಬಳಕೆಗೆ ಬಳಸುತ್ತಿರುವುದು ಹಾಗೂ ವಾಲ್ಮೀಕಿ ಸಮುದಾಯದವರು ಜೀವನೋಪಾಯಕ್ಕಾಗಿ ನಿರ್ಮಿಸಿಕೊಂಡಿದ್ದ ಹೋಟೆಲ್ ಕಟ್ಟಡವನ್ನು ಬೆದರಿಸಿ ಆಕ್ರಮಿಸಿಕೊಂಡಿರುವ ಆರೋಪಗಳು ಸಭೆಯಲ್ಲಿ ಕೇಳಿಬಂದವು.  

ಈ ಅಕ್ರಮ ಆಕ್ರಮಣಗಳನ್ನು ತಕ್ಷಣ ತೆರವುಗೊಳಿಸಿ ಸರ್ಕಾರಿ ಸ್ವತ್ತುಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ವಾಲ್ಮೀಕಿ ಸಮುದಾಯದ ಹೋಟೆಲ್ ಕಟ್ಟಡವನ್ನು ಕೂಡ ಮರಳಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  

ಜಾತಿನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಒಟ್ಟು 28 ಆರೋಪಿತರ ವಿರುದ್ಧ ಕಾನೂನುಬದ್ಧ ಕ್ರಮ ಜರುಗಿಸಿ, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ನ್ಯಾಯವನ್ನು ಮರುಸ್ಥಾಪಿಸಬೇಕೆಂದು ಸಂತ್ರಸ್ತ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ