ಸದಸ್ಯರ ವಿಶ್ವಾಸವಿದ್ದರೆ ಸಂಘದ ಬೆಳವಣಿಗೆ ಸಾಧ್ಯ : ಬಿರಾದಾರ
ತಾಳಿಕೋಟಿ 21 : ಜನರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ. ಸದಸ್ಯರ ವಿಶ್ವಾಸವಿದ್ದರೆ ಯಾವುದೇ ಸಂಘ ಸತತವಾಗಿ ಬೆಳವಣಿಗೆಯಾಗಲು ಸಾಧ್ಯವಿದೆ ಎಂದು ಹಿರೂರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಗಣ್ಣ ಬಿರಾದಾರ ಹೇಳಿದರು.
ತಾಲೂಕಿನ ಹಿರೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ 80 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ರವಿವಾರ ಅವರು ಮಾತನಾಡಿದರು.
ರೈತರು ಸಂಘದಿಂದ ಪಡೆದುಕೊಂಡ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು ಸಂಘದ ವಾರ್ಷಿಕ ವರದಿಯನ್ನು ವಾಚಿಸಿ ಸಂಘವು ಪ್ರಸಕ್ತ ವರ್ಷದಲ್ಲಿ 2116 ಶೇರುದಾರರನ್ನು ಹೊಂದಿದ್ದು, 5.34 ಕೋಟಿ ದುಡಿಯುವ ಬಂಡವಾಳ, 85.26 ಲಕ್ಷ ಶೇರು ಬಂಡವಾಳ, 4.31ಕೋಟಿ ಠೇವುಗಳು ಹಾಗೂ ರೂ. 6.29 ಕೋಟಿ ಸಾಲಗಳನ್ನು ನೀಡಿದ್ದು ಸಂಘ ಪ್ರತಿ ವರ್ಷವೂ ಪ್ರಗತಿಯನ್ನು ಸಾಧಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬೀರ್ಪ ಪೂಜಾರಿ, ಸಿದ್ದಣ್ಣ ಚೌದ್ರಿ, ಶಿವಾನಂದ ಪಾಟೀಲ, ಈಶ್ವರ್ಪ ಮಂಟಗಿ, ಚಂದ್ರಶೇಖರ್ ಧನ್ನೂರ, ಮುರ್ತುಜಾ ಮುಲ್ಲಾ, ಶರಣಪ್ಪ ತಳವಾರ, ಸುಭಾಷ ಹರಿಜನ, ಮಾದೇವಿ ನೀ.ಆಲ್ಯಾಳ, ಸವಿತಾ ಸಂ ಅಸ್ಕಿ, ಚಾಂದಬಿ ಅ.ಬಳವಾಟ, ಸಂಘದ ಶೇರದಾರರು ಹಾಗೂ ಗ್ರಾಮದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.