ಸ್ಪರ್ಧಾ ಮನಸುಗಳಿಗೆ ಸ್ಫೂರ್ತಿಯಾದ ಅಶೋಕ ಗಡ್ಡಿಗೌಡರ
ಬೈಲಹೊಂಗಲ 15: ಸತತ ಪ್ರಯತ್ನ ಮತ್ತು ನಿರಂತರ ಅಧ್ಯಯನ ಹಾಗೂ ಆತ್ಮ ವಿಶ್ವಾಸ ಒಂದಿದ್ದರೆ ಸಾಕು ಎಂಥ ಗುರಿಯನ್ನಾದರು ಮುಟ್ಟಲು ಸಾಧ್ಯ ಎಂಬುದನ್ನು ಗಂಡು ಮೆಟ್ಟಿನ ನಾಡು ಬೈಲಹೊಂಗಲ ತಾಲೂಕಿನ ಜಕನಾಯನಕೊಪ್ಪ ಗ್ರಾಮದ ಹೆಮ್ಮೆಯ ಮಾಜಿ ಸೈನಿಕ ಅಶೋಕ ದುಂಡಪ್ಪ ಗಡ್ಡಿಗೌಡರ ತೋರಿಸಿಕೊಟ್ಟಿದ್ದಾರೆ.
ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾದ ಇವರು ಸ್ವಗ್ರಾಮ ಹಣ್ಣಿಕೇರಿಯಲ್ಲಿ ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡಿ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಮೂರು ವರ್ಷ ನೇಸರಗಿಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ನಲ್ಲಿ ಇದ್ದು ಪ್ರತಿಷ್ಠಿತ ವಿದ್ಯಾಮಂದಿರ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿಕೊಂಡು, ನಂತರ ಬೈಲಹೊಂಗಲದ ಕೆ .ಆರ್. ಸಿ. ಎಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿಕೊಂಡು ದೇಶ ಸೇವೆಯ ಕನಸು ಕಂಡು ಭಾರತೀಯ ಸೈನ್ಯ ಸೇರುತ್ತಾರೆ.
ಭಾರತೀಯ ಸೈನ್ಯದಲ್ಲಿ ಏರೋನಾಟಿಕಲ್ ಇಂಜನಿಯರ್ ಆಗಿ ಹದಿನೈದು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಸೈನ್ಯದಲ್ಲಿ ಇದ್ದಾಗಲೇ ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಬಿ. ಎ ಪದವಿ ಮತ್ತು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಎಂ.ಎ ಪದವಿ ಪಡೆದ ನಂತರ ಇತಿಹಾಸ ವಿಷಯದಲ್ಲಿ ಎಂಎ ಪದವಿ ಪಡೆದುಕೊಂಡಿರುವುದು ವಿಶೇಷ. ಅಷ್ಟೇ ಅಲ್ಲದೆ ಸರ್ಕಾರಿ ಪದವಿ ಕಾಲೇಜು ಹುದ್ದೆಗೆ ಅರ್ಹತಾದಾಯಕ ಪರೀಕ್ಷೆಯಾದ ಸೇಟ್ ಪರೀಕ್ಷೆಯನ್ನು ಉತ್ತೀರ್ಣರಾಗಿರುವದು ಅವರ ಶ್ರಮ ಮತ್ತು ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರು ಸೈನ್ಯದಿಂದ ನಿವೃತಿ ಪಡೆದು ತಮ್ಮ ಸುಂದರ ಕುಂಟುಂಬ ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ಹಾಯಾಗಿ ಕಾಲ ಕಳೆಯಬಹುದಿತ್ತು ಮಾಡದೆ ತಾವು ಚಿಕ್ಕವರಾಗಿದ್ದಾಗ ಅನುಭುವಿಸಿದ ಕಷ್ಟ ನೋವುಗಳನ್ನು ಮನಸಿನಲ್ಲಿಟ್ಟುಕೊಂಡು ಸಮಾಜ ಹಾಗೂ ಬಡ ಮಕ್ಕಳಿಗೆ ಸಹಾಯ ಮಾಡುವ ಸದುದ್ದೇಶದೊಂದಿಗೆ, ಕೆಲ ದಿನಗಳಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸನ್ನದ್ಧರಾಗಿ ನಿರಂತರವಾಗಿ ಕೆ ಎಸ್ಆರ್ಪಿ, ಪಿಎಸ್ಐ, ರಿಸರ್ವ್ ಪಿಎಸ್ಐ, ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಮತ್ತು ಸಿವಿಲ್ ಪಿಎಸ್ಐ ಆಗಿ ನೇಮಕ. ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪಿಎಸ್ಐ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, ಈಗ ಸದ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಿ ನೇಮಕಗೊಂಡಿದ್ದಾರೆ.
ಕಠಿಣ ಪರಿಶ್ರಮ ಮತ್ತು ನಿತ್ಯ ಅಧ್ಯಯನ ಹಾಗೂ ಛಲ, ಆತ್ಮ ವಿಶ್ವಾಸ ಇಟ್ಟುಕೊಂಡು ಮುನ್ನುಗ್ಗುವ ಮನಸಿದ್ದರೆ ನೀರೀಕ್ಷಿತ ಗುರಿ ಮುಟ್ಟಲು ಸಾಧ್ಯ ಎನ್ನುವದನ್ನು ಅವರು ತೋರಿಸಿಕೊಟ್ಟು ಅನೇಕ ಸ್ಪರ್ಧಾ ಮನಸುಗಳಿಗೆ ಮಾದರಿಯಾಗಿ ಸ್ಫೂರ್ತಿಯಾಗಿದ್ದಾರೆ.
ಅವರ ಈ ಸಾಧನೆಗೆ ಕುಟುಂಬ ವರ್ಗ, ಗುರು ವೃಂದ, ಸ್ನೇಹಿತ ಬಳಗ, ಗ್ರಾಮದವರು ಹಾಗೂ ಮಾಜಿ ಸೈನಿಕರ ಬಳಗದವರು ಅಭಿನಂದಿಸಿದ್ದಾರೆ.
""ಈ ಇಲಾಖೆಯ ಅಧಿಕಾರಿಯಾಗಿ ನೇಮಕ ಆಗಿರುವುದು ಸಂತಸ ತಂದಿದೆ. ಮತ್ತು ಕನ್ನಡ ನಾಡು ನುಡಿಯ ಸೇವೆ ಮಾಡುವ ಸೌಭಾಗ್ಯ ದೊರಿಕಿದ್ದು ಹೆಮ್ಮೆಯ ವಿಷಯವಾಗಿದೆ. ನನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಬಡವರ ಮತ್ತು ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸುವ ಆಶಯ ನನ್ನದಾಗಿದೆ.
ಅಶೋಕ ದುಂಡಪ್ಪ ಗಡ್ಡಿಗೌಡರ
ಮಾಜಿ ಸೈನಿಕ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ