ಮನರಂಜನೆ

ಪುತ್ರನಿಗೆ ಜಾಮೀನು; ಶಾರೂಖ್ ಆನಂದಭಾಷ್ಪ

ಪುತ್ರನಿಗೆ ಜಾಮೀನು; ಶಾರೂಖ್ ಆನಂದಭಾಷ್ಪ

ಮುಂಬೈ: ಅಕ್ಟೋಬರ್ 29: ಎರಡು ನ್ಯಾಯಾಲಯಗಳಲ್ಲಿ ಆರ್ಯನ್ ಖಾನ್ಗೆ ಜಾಮೀನು ನಿರಾಕರಣೆ ನಂತರ ಇವರ ಪೋಷಕರು ತೀವ್ರ ಚಿಂತಿತರಾಗಿದ್ದರು. ಹೈಕೋರ್ಟಿನಲ್ಲಿ ಜಾಮೀನು ದೊರೆತ ನಂತರ ಶಾರೂಖ್ ಖಾನ್ ಭಾವೋದ್ವೇಗದಿಂದ ಸಂತೋಷದ ಕಣ್ಣೀರು ಹರಿಸಿದರು ಎಂದು ವಕೀಲರು ಹೇಳಿದ್ದಾರೆ.

ಬಾಂಬೆ ಉಚ್ಛ ನ್ಯಾಯಾಲಯ ಅಕ್ಟೋಬರ್ 28 ರಂದು ಆರ್ಯನ್ ಖಾನ್ ಗೆ ಜಾಮೀನು ನೀಡಿತು. ಆ ಕ್ಷಣದವರೆಗೆ ಶಾರೂಖ್ ಉದ್ವೇಗದಿಂದ ಚಡಪಡಿಸುತ್ತಿದ್ದರು. ಇದರ ಶಮನಕ್ಕಾಗಿ ಪದೇಪದೇ ಕಾಫಿ ಕುಡಿಯುತ್ತಿದ್ದರು. ಆರ್ಯನ್ ಗೆ ಜಾಮೀನು ದೊರೆತ ನಂತರ ಅವರು ನಿರಾಳರಾದರು. ಉದ್ವೇಗದಿಂದ ಅವರ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಬಂತು ಎಂದು ಆರ್ಯನ್ ಪರ ವಕೀಲ ಮುಕಲ್ ರೋಹಟಗಿ ಹೇಳಿದ್ದಾರೆ.

ಕಳೆದ ಕೆಲವಾರು ದಿನಗಳಿಂದ ಶಾರೂಖ್ ಖಾನ್ ಊಟ ತಿಂಡಿ ನಿದ್ರೆ ಸರಿಯಾಗಿ ಮಾಡಿರಲಿಲ್ಲ. ಮಗ ಜೈಲಿನಲ್ಲಿರುವುದರಿಂದ ಒತ್ತಡದಲ್ಲಿದ್ದರು. ಜಾಮೀನು ದೊರೆತ ನಂತರ ಅವರನ್ನು ಭೇಟಿಯಾದಾಗ ಅವರ ಮುಖದಲ್ಲಿ ನಿರಾಳತೆ ಭಾವವಿತ್ತು. ಅವರು ವಕೀಲರಲ್ಲ. ಆದರೆ ಅವರು ಉತ್ತಮ ಸಾಮಾನ್ಯ ಜ್ಞಾನ ಹೊಂದಿದ್ದಾರೆ. ಮಗ ಆರ್ಯನ್ ಹಿನ್ನೆಲೆ ಏನು, ಎಲ್ಲಿ ಓದಿದ, ಚಾಟ್ ಗಳು ಯಾವುವು ಎಂದು ಹೇಳಲು ಅವರು ಪ್ರಯತ್ನಿಸುತ್ತಿದ್ದರು ಎಂದು ವಕೀಲ ರೋಹಟಗಿ ವಿವರಿಸಿದ್ದಾರೆ.ಪುತ್ರನಿಗೆ ಜಾಮೀನು ದೊರೆತ ಸುದ್ದಿ ಕೇಳಿದ ನಂತರ ಅವರು ಈ ಬಗ್ಗೆ ಹೇಳಲು ಬಂದ ವಕೀಲರ ತಂಡದೊಂದಿಗೆ ತೆಗೆಸಿಕೊಂಡ  ಚಿತ್ರಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.  

ಜಾಮೀನು ಸಂಬಂಧದ ಷರತ್ತುಗಳ ಬಗ್ಗೆ ನ್ಯಾಯಾಲಯ ಇನ್ನೂ ತಿಳಿಸಬೇಕಾಗಿರುವ ಕಾರಣ ಇಂದು ಸಂಜೆ ಆರ್ಯನ್ ಅರ್ಥರ್ ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ. ಆರ್ಯನ್ ಜತೆ ಬಂಧಿತರಾಗಿದ್ದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರುಗಳಿಗೂ ನ್ಯಾಯಾಲಯ  ಜಾಮೀನು ನೀಡಿದೆ.

ಸುದ್ದಿ ಓದಿ