ಬಳ್ಳಾರಿ

ಅರುಣಾಬ್ಜ ಕವಿಯ ತುಳು ಮಹಾಭಾರತ: ವಿಶೇಷ ಉಪನ್ಯಾಸ

ಅರುಣಾಬ್ಜ ಕವಿಯ ತುಳು ಮಹಾಭಾರತ: ವಿಶೇಷ ಉಪನ್ಯಾಸ

ಬಳ್ಳಾರಿ 07: ತುಳು ಭಾಷೆ ಕೇವಲ ಮೌಖಿಕವಾದ ಆಡುನುಡಿಯಾಗಿರದೇ, 13-14ನೇ ಶತಮಾನದಲ್ಲೇ ಲಿಖಿತ ರೂಪದ ಸಾಹಿತ್ಯ ಪ್ರಕಾರದಲ್ಲಿ ಸಮೃದ್ಧವಾಗಿ ಬೆಳೆದು ಬಂದಿತ್ತು ಎಂಬುದಕ್ಕೆ ತುಳು ಭಾಷೆಯ ಮೇಲೆ ಬೆಳಕು ಚೆಲ್ಲುವ ಅರುಣಾಬ್ಜ ಕವಿಯ ತುಳು ಮಹಾಭಾರತವೇ ಸಾಕ್ಷಿ ಎಂದು ಡಾ. ಧನಂಜಯ ಕುಂಬ್ಳೆ ಅವರು ಹೇಳಿದರು.  

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅರುಣಾಬ್ಜ ಕವಿಯ ತುಳು ಮಹಾಭಾರತ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು,  

 ‘ತುಳು ಸಾಹಿತ್ಯದ ಮೇಲೆ ದ್ರಾವಿಡ ಭಾಷೆ ಮತ್ತು ಕಾವ್ಯಗಳ ಪ್ರಭಾವಗಳನ್ನು ಈ ಕಾವ್ಯದಲ್ಲಿ ಗ್ರಹಿಸಬಹುದಾಗಿದೆ. ಇದರಲ್ಲಿ ಸಂಸ್ಕೃತ ಮಹಾಭಾರತದ ಆದಿಪರ್ವವನ್ನು ಮೂಲ ಆಕರವಾಗಿ ಬಳಸಿಕೊಳ್ಳಲಾಗಿದೆ. ಮೂಲ ಮಹಾಭಾರತದ ಪುನರ್‌ಸೃಷ್ಟಿಯೇ ತುಳು ಮಹಾಭಾರತವಾಗಿದೆ. ಕನ್ನಡ ಕುಮಾರವ್ಯಾಸನ ಕಾವ್ಯದ ಪ್ರಭಾವ ಈ ಕಾವ್ಯದ ಮೇಲೆ ಆಗಿರುವುದು ಸ್ಪಷ್ಟ. ಈ ಮೂಲಕ ಕನ್ನಡದ ಕುಮಾರವ್ಯಾಸನ ಕಾಲಘಟ್ಟದ ಸ್ಪಷ್ಟತೆ ದೊರಕುತ್ತದೆ. ಅನ್ಯಭಾಷೆಯ ಕವಿ ಮತ್ತು ಅವರ ಕಾವ್ಯದ ವಸ್ತುವಿನ ಪ್ರಭಾವ ಈ ಕವಿಯ ಮೇಲಾದರೂ, ಕವಿ ತನ್ನ ತುಳುನಾಡಿನ ಭಾಷಾ ಸಂಸ್ಕೃತಿಯನ್ನು ಹಲವು ಉಪಕಥೆಗಳಲ್ಲಿ ಸ್ವತಂತ್ರವಾಗಿ ಕಟ್ಟಿಕೊಟ್ಟಿದ್ದಾನೆ. ಅದಕ್ಕೆ ಕಾವ್ಯದಲ್ಲಿ ಬರುವ ಅಂಬಿಗನ ಪ್ರಸಂಗ, ದೈವಾರಾಧನೆ ಪ್ರಸಂಗ, ಭೀಷ್ಮನ ಆಯುಷ್ಯ ಕಥೆ, ಐರಾವತ ಪ್ರಸಂಗಗಳನ್ನು ಮಾದರಿಯಾಗಿವೆ. ಕಾವ್ಯದಲ್ಲಿನ ರಾಚನಿಕ ಅಂಶಗಳನ್ನು ಗಮನಿಸಿದಾಗ ಕನ್ನಡದಲ್ಲಿ ವಿರಳವಾಗಿ ದೊರಕುವ ಅಂಶ ಛಂದಸ್ಸನ್ನು ವೈಶಿಷ್ಟ್ಯವಾಗಿ ಬಳಸಿದ್ದಾರೆ. ತುಳುನಾಡಿನ ಅರುಣಾಬ್ಜ ಕವಿಯ ತುಳು ಮಹಾಭಾರತ ಮತ್ತು ಕನ್ನಡದ ಕುಮಾರವ್ಯಾಸನ ಕುಮಾರವ್ಯಾಸಭಾರತವನ್ನು ತೌಲನಿಕವಾಗಿ ಸಂಶೋಧಿಸಲು ಅವಕಾಶಗಳಿವೆ. ಇಷ್ಟೆಲ್ಲಾ ತುಳುವಿನ ಸಾಹಿತ್ಯ ಸಂಪತ್ತು ಸಮೃದ್ಧತೆಯಿಂದ ಕೂಡಿದ್ದರೂ, ಪ್ರಭುತ್ವದ ಶಕ್ತಿ ದೊರಕದಿದ್ದಾಗ ಒಂದು ಭಾಷೆ ಯಾವ ಪ್ರಮಾಣದಲ್ಲಿ ಸೊರಗಿಹೋಗುತ್ತದೆ ಎನ್ನುವುದಕ್ಕೆ ತುಳು ಭಾಷೆಯೇ ಸಾಕ್ಷಿಯಾಗಿ ನಿಂತಿದೆ’ ಎಂದು ಅವರು ಹೇಳಿದರು.  

ವಿಭಾಗದ ಮುಖ್ಯಸ್ಥ ಡಾ. ಮೋಹನ ಕುಂಟಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿ ತನುಜಾ ಪ್ರಾರ್ಥಿಸಿದರು. ಬೇರಿ​‍್ಗ ಜಯಶ್ರೀ ಸ್ವಾಗತಿಸಿದರು. ವೀನಿತಾ ಜೆ. ಎಂ. ವಂದಿಸಿದರು. ನಾಯಕರ ಜಯಮ್ಮ ನಿರೂಪಿಸಿದರು. 


ಸುದ್ದಿ ಓದಿ