ಅಗತ್ಯವಿರುವೆಡೆ ಹಣ್ಣುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ: ಅಧಿಕಾರಿಗಳಿಗೆ ಆನಂದಸಿಂಗ್ ಸೂಚನೆ
ಬಳ್ಳಾರಿ, ಏ.25, ಕೋವಿಡ್-19ನ ಲಾಕ್‍ಡೌನ್ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಇದೆ ಎಂಬ ಕಾರಣ ಹೇಳಿಕೊಂಡು ಅಧಿಕಾರಿಗಳು ಸುಮ್ಮನಿರದೇ ರೈತರೊಂದಿಗೆ ಸಮನ್ವಯ ನಡೆಸಿ ಕಾರ್ಯಪ್ರವೃತ್ತರಾಗುವ ಕೆಲಸ ಮಾಡಬೇಕು; ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಹಿನ್ನೆಲೆ ಶನಿವಾರ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಂಜೂರು, ಸುಗಂಧಿ ಬಾಳೆಹಣ್ಣು, ಸಪೋಟಾ, ಪಪ್ಪಾಯ, ದಾಳಿಂಬೆ, ಸೀಬೆಹಣ್ಣು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆಯ ಬೆಳೆಗಳನ್ನು ಬೆಳೆದಿರುವ ರೈತರು ಈ ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಜನರೊಂದಿಗೆ ಸಮನ್ವಯ ನಡೆಸಿ ಅವರಿಗೆ ನೆರವಾಗುವ ಕೆಲಸ ಮಾಡಬೇಕೇ ವಿನಃ ಕುಂಟುನೆಪ ಹೇಳಿಕೊಂಡು ಸುಮ್ಮನೆಕುಳಿತುಕೊಳ್ಳುವುದಲ್ಲ ಎಂದು ಹೇಳಿದ ಅವರು, ತೋಟಗಾರಿಕೆ ಬೆಳೆಗಳು ಮತ್ತು ದಾನಿಗಳ ಮಧ್ಯ ಕೊಂಡಿಯಾಗಿ, ಅಗತ್ಯವಿರುವೆಡೆ ಹಣ್ಣುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರು. ಇಡೀ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ಈ ಲಾಕ್‍ಡೌನ್‍ನಿಂದ ಸಮಸ್ಯೆ ಎದುರಿಸುತ್ತಿವೆ ಎಂಬುದರ ವಿವರವನ್ನು ಸಮೀಕ್ಷೆ ನಡೆಸಿ ನೀಡುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಭೋಗಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.