ಭಾರತ್ ಜೋಡೋ ಯುವ ಸಂಘಗಳಿಗೆ ಸದಸ್ಯತ್ವ ನೋಂದಣಿಗೆ ಅರ್ಜಿ ಆಹ್ವಾನ
ದೇವರಹಿಪ್ಪರಗಿ 16 : ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ್ ಪಟೇಲ್ ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ 17 ವಾರ್ಡ್ಗಳಲ್ಲಿ ಪ್ರತಿ 4 ಸಾವಿರ ಜನಸಂಖ್ಯೆಗೆ ಒಂದರಂತೆ ಯುವ ಸಂಘಗಳನ್ನು ರಚಿಸಲಾಗುತ್ತಿದೆ. 16ರಿಂದ 35 ವರ್ಷದೊಳಗಿನ ಯುವಕರು ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆಧಾರ್ ಆಧಾರಿತವಾಗಿ ನೋಂದಾಯಿಸಿ ಕೊಳ್ಳಬಹುದು. ಸದಸ್ಯತ್ವ ನೋಂದಣಿಗೆ ರೂ10 ಶುಲ್ಕ ನಿಗದಿಪಡಿಸಲಾಗಿದ್ದು, ಒಬ್ಬ ವ್ಯಕ್ತಿ ಒಂದು ಸಂಘಕ್ಕೆ ಮಾತ್ರ ಸದಸ್ಯನಾಗಲು ಅವಕಾಶವಿದೆ. ಪ್ರತಿ ಸಂಘ ರಚನೆಗೆ ಕನಿಷ್ಠ 100 ಸದಸ್ಯರ ನೋಂದಣಿ ಕಡ್ಡಾಯವಾಗಿದೆ. ಸದಸ್ಯತ್ವಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಥವಾ ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಆದೇಶದ ಮೇರೆಗೆ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.