ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ತಹಶೀಲ್ದಾರಗೆ ಮನವಿ
ತಾಳಿಕೋಟಿ: ಇತ್ತೀಚಿಗೆ ಕಲಬುರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಕೊರಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅಮಾನುಷ ಅತ್ಯಾಚಾರದ ಘಟನೆಯನ್ನು ಖಂಡಿಸಿ ಅತ್ಯಾಚಾರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಉಪನ್ಯಾಸಕ ಪ್ರಕಾಶ ವಾಲಿಕಾರ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಪದೆ ಪದೆ ಇಂಥಹ ಅಮಾನವೀಯವಾದ ಅತ್ಯಾಚಾರದ ಘಟನೆಗಳು ನಡೆಯುತ್ತಲೇ ಇವೆ. ಅಪ್ರಾಪ್ತ ಬಾಲಕೀಯರಿಗೆ ಸೂಕ್ತವಾದ ರಕ್ಷಣೆ ಇಲ್ಲದಂಥಹ ವಾತಾವರಣವು ನಿರ್ಮಾಣವಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಇಂಥಹ ಘಟನೆಗಳಿಂದ ಪಾಲಕರು ಭಯಪಡುವಂತಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಅತ್ಯಾಚಾರವನ್ನು ಎಸಗಿದ ಪಾಪಿಗಳನ್ನು ಅತ್ಯುಗ್ರ ಶಿಕ್ಷೆಗೆ ಒಳಪಡಿಸಿ ಇಂಥಹ ಘಟನೆಗಳು ಭವಿಷ್ಯದಲ್ಲಿ ಮತ್ತೇ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ವ್ಯವಸ್ಥೆಯದ್ದಾಗಿದೆ ಎಂದರು.
ವಿದ್ಯಾರ್ಥಿ ಗಳಾದ ಕೀರ್ತಿ ಹಜೇರಿ, ಪ್ರೇಮಾ ಬಸವರಾಜ, ಅರ್ಪಿತಾ ದೇವರಮನಿ, ಸವಿತಾ ಪೂಜಾರಿ, ಅಕ್ಷತಾ ಬೂದಿಹಾಳ, ಬಸವರಾಜ ಚಲವಾದಿ, ಅರುಣ ಹಿರೇಮಠ, ಬಸವರಾಜ ಚಿಕ್ಕಮಠ, ಗುರುನಾಥ ರಾಠೋಡ, ಆಕಾಶ ಭೀಮಣ್ಣ, ಶಿವರಾಜ ಹೊಸಮನಿ, ಸಿದ್ಧಾರ್ಥ ಹರಿಜನ, ಅಮರ ಛಾಯಾಗೋಳ, ಮಡಿವಾಳಪ್ಪ ಪಾಟೀಲ, ಭರತ ಖಾನಾಪೂರ ಇದ್ದರು