ಆಶ್ರಯ ಮನೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಮನವಿ
ಮುಂಡರಗಿ 30: ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಶ್ರಯ ಮನೆಗಳನ್ನು ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬುಧವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡಗಳಲ್ಲಿ ಬಡವರಿಗೆ ಆಶ್ರಯ ಮನೆಗಳನ್ನು ಸೂಕ್ತ ಫಲಾನುಭವಿಗಳಿಗೆ ಹಂಚಿ ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಜಮೀನು ಖರೀದಿ ಮಾಡಿಕೊಟ್ಟಿದೆ. ಆದರೆ ಅದನ್ನು ಬಡ ಜನರಿಗೆ ತಲುಪಿಸದೇ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆಶ್ರಯ ಮನೆಗಳ ಜಾಗೆಯನ್ನು ವೈಜ್ಞಾನಿಕವಾಗಿ ಸರ್ವೆ ಕಾರ್ಯ ಪ್ರಾರಂಭಿಸಿ ಸೂಕ್ತವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು.
ಹಾಗೂ ಆಶ್ರಯ ಮನೆಗಳ ಹಂಚಿಕೆಯಲ್ಲಿ ರಾಜಕೀಯ ಬೆರೆತು ಫಲಾನುಭವಿಗಳಿಗೆ ನಿರಾಶೆಯನ್ನು ತಂದೊಡ್ಡಿದ್ದಾರೆ. ಆಶ್ರಯ ಮನೆಗಳ ಹಂಚಿಕೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುವ ಪುರಸಭೆ ಆಡಳಿತ ಮಂಡಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ದಿಕ್ಕಾರ ಸೂಚಿಸಿದರು. ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸಮಗ್ರವಾಗಿ ಚರ್ಚಿಸಿ ಅರ್ಹ ಫಲಾನುಭವಿಗಳನ್ನು ಪಟ್ಟಿ ಮಾಡಿ ಅವರಿಗೆ ಆಶ್ರಯ ಮನೆಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರತಿನಿತ್ಯ ಮಳೆಯಾಗುವ ಸಂದರ್ಭದಲ್ಲಿ ಪಟ್ಟಣದ ಬಡವರು ಹಳೆ ಮನೆಗಳನ್ನು ಹೊಂದಿದ್ದು ದಿನನಿತ್ಯ ಸೋರುವ ಸ್ಥಿತಿಯಲ್ಲಿವೆ. ಕೆಲವೊಂದು ಕುಟುಂಬಗಳು ಒಂದೇ ಮನೆಯಲ್ಲಿ ಮೂರು-ನಾಲ್ಕು ಸಂಸಾರಸ್ಥರು ವಾಸವಾಗಿದ್ದಾರೆ. ಅವರ ಪರಿಸ್ಥಿತಿ ತುಂಬಾ ಗಂಬೀರವಾಗಿದೆ. ಆದ್ದರಿಂದ ಪುರಸಭೆ ಆಡಳಿತ ಮಂಡಳಿ ಆಶ್ರಯ ಮನೆಯಲ್ಲಿ ವೈಫಲ್ಯ ಕಂಡಿದೆ. ಹೀಗಾಗಿ ಅಧಿಕಾರಿಗಳು ಶೀಘ್ರದಲ್ಲಿ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು. ಇಲ್ಲವಾದರೆ ಪುರಸಭೆ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.