ಬಳ್ಳಾರಿಯನ್ನು ಸ್ಮಾರ್ಟ್‍ಸಿಟಿಯಾಗಿ ಅಭಿವೃದ್ಧಿ ಪಡಿಸುವಂತೆ ಸಿಎಂಗೆ ಮನವಿ
ಬಳ್ಳಾರಿ 23; ಸಮ್ಮೇಳನ ಸಭಾಂಗಣ, ವಿಧಾನ ಸೌಧ, ಬೆಂಗಳೂರಿನಲ್ಲಿ ರಾಜ್ಯ ಆಯ-ವ್ಯಯ 2021 ಪೂರ್ವ ಭಾವಿ ಸಭೆಯನ್ನು ಕೈಗಾರಿಕೋದ್ಯಮಿಗಳೊಂದಿಗೆ ಬಿ. ಎಸ್. ಯಡಿಯೂರಪ್ಪ, ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಆಯೋಜಿಸಿದ್ದರು.
ಕರ್ನಾಟಕ ಸರ್ಕಾರದ ಆಹ್ವಾನದ ಮೇರೆಗೆ ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶ್‍ವಂತ್‍ರಾಜ್ ನಾಗಿರೆಡ್ಡಿ, ಇವರು ಭಾಗವಹಿಸಿ ಬಳ್ಳಾರಿ ನಗರದ ಬೇಡಿಕೆಗಳಾದ ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಅಂತರ್‍ರಾಷ್ಠ್ರೀಯ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸುವುದು, ಬಳ್ಳಾರಿಯ ಹಗರಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಒತ್ತು ನೀಡಿ ಕೃಷಿ ಕಾಲೇಜು ಸ್ಥಾಪಿಸುವುದು, ನಗರದ ಕೆ.ಐ.ಎ.ಡಿ.ಬಿ ಪ್ರದೇಶಗಳಲ್ಲಿನ ಮೂಲ ಭೂತ ಸೌಕರ್ಯಗಳಿಗೆ ಅನುದಾನ ನೀಡುವುದು,.
ಬಳ್ಳಾರಿ ನಗರವನ್ನು ಸ್ಮಾರ್ಟ್‍ಸಿಟಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದು, ಆಸ್ತಿ ತೆರಿಗೆಯನ್ನು ಪ್ರತೀ ವರ್ಷ ಏರಿಕೆ ಮಾಡದಂತೆ ಕ್ರಮ ವಹಿಸುವುದು, ಕರಸಮಾಧಾನ ಯೋಜನೆಯನ್ನು ಪುನಃ ಅನುಷ್ಠಾನಗೊಳಿಸಿ ಮೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲಿ ಬಾಕಿ ಇರುವ ತೆರಿಗೆಯನ್ನು ಪಾವತಿಸಲು ಅನುವು ಮಾಡಿಕೊಡುವುದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ದಾಸ್ತಾನಗಳನ್ನು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದು, ಹೀಗೆ ನಗರದ ಹಾಗೂ ಜಿಲ್ಲೆಯ ಬೇಡಿಕೆಗಳ ಬಗ್ಗೆ ವಿವರಿಸಿ ನಂತರ ಮನವಿ ಪತ್ರವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಮುಖ್ಯಮಂತ್ರಿಗಳು ಕೂಡ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸುವುದಾಗಿ ಸೂಚಿಸಿದ್ದಾರೆ. ಈ ಸಭೆಯಲ್ಲಿ ಗೌರವ ಕಾರ್ಯದರ್ಶಿಗಳೊಂದಿಗೆ ವಿ. ರಾಮಚಂದ್ರ, ಚೇರ್‍ಮನ್, ಎ.ಪಿ.ಎಂ.ಸಿ ಕಮಿಟಿ, ಟಿ. ಶ್ರೀನಿವಾಸ್ ರಾವ್, ಚೇರ್‍ಮನ್, ಮಾಧ್ಯಮ/ಪತ್ರಿಕೆ, ನಾಗಳ್ಳಿ ರಮೇಶ್, ಚೇರ್‍ಮನ್, ಕೌಶಲ್ಯಾಭಿವೃದ್ದಿ ಸಂಸ್ಥೆ ಮತ್ತು ಎಂ. ಶೇಶಿರೆಡ್ಡಿ, ವಿಶೇಷ ಆಹ್ವಾನಿತರು ಭಾಗಿಯಾಗಿದ್ದರು.