ರಸ್ತೆ ಸರಿಪಡಿಸುವಂತೆ ರೈತರು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ
ಹುನಗುಂದ 03: ವರ್ಷದುದ್ದಕ್ಕೂ ಕೃಷಿ ಚಟುವಟಿಕೆಗೆ ಬಳಕೆಯಾಗುವ ಜಮೀನುಗಳಿಗೆ ಹೋಗುವ ರಸ್ತೆಯನ್ನು ಸರಿಪಡಿಸುವಂತೆ ತಾಲೂಕಿನ ಗಂಗೂರ ಗ್ರಾಮದ ರೈತರು ಒತ್ತಾಯಿಸಿ ತಾಲೂಕಾಡಳಿತ ಮುಂದೆ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸೋಮವಾರ ತಾಲೂಕಾಡಳಿತ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಎಸ್.ಟಿ. ಹಂಡರಗಲ್ ನ್ಯಾಯವಾದಿ ಅವರು ಮಾತನಾಡಿ ಗಂಗೂರ ರಸ್ತೆಯಿಂದ ಹುನಗುಂದಕ್ಕೆ ಬರುವ ಎರಿ ರಸ್ತೆಯು ಕಳೆದ 70ವರ್ಷಗಳಿಂದ ದುರಸ್ತಿಯಾಗಿರುವದಿಲ್ಲ. ಈ ರಸ್ತೆಗೆ ಹೊಂದಿ ಬಹುತೇಕ ಕೃಷಿ ಭೂಮಿ ಇದೆ. ಕೃಷಿ ಚಟುವಟಿಕೆಗೆ ಹೋಗಲು ರೈತರು ಹರಸಾಹಸ ಪಡಬೇಕಾಗಿದೆ. ಈ ರಸ್ತೆ ರಿಪೇರಿ ಕುರಿತು ಗ್ರಾಮದ ರೈತರು ಗ್ರಾಮ ಪಂಚಾಯತ್ ಹಿಡಿದು ಜಿಪಂ ಜನಪ್ರತಿನಿಧಿಗ ಳವರೆಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಮೌಖಿಕವಾಗಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿ ವರ್ಗವಂತೂ ಹರೋ-ಹರ ಎನ್ನುವಂತೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ವರ್ಷದುದ್ದಕ್ಕೂ ಈ ರಸ್ತೆಯಲ್ಲಿ ಮೊಣಕಾಲವರೆಗೆ ನೀರು ಹರಿಯುತ್ತಿದ್ದು, ಹಾವು ಹುಳ ಹುಪ್ಪಡಿಗಳು ಹರಿದಾಡುತ್ತಿವೆ. ರೈತರು ಅದೆ ರಸ್ತೆಯಲ್ಲಿ ಕೃಷಿ ಸಾಮಗ್ರಿಗಳೊಂದಿಗೆ ಜಾನುವಾರು ತೆಗೆದುಕೊಂಡು ಹೋಗಲು ಕಷ್ಟಕರವಾಗಿದೆ. ಪಕ್ಕದಲ್ಲಿ ಎಡೆಬಿಡದೆ ಬೆಳೆದಿರುವ ಜೀನಿ ಕಂಟಿಯಿಂದ ಹೊಲಗಳಿಗೆ ಹೋಗುವ ರೈತ ಮಹಿಳೆಯರು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಪಟ್ಟವರು ಕಣ್ಮುಚ್ಚಿ ಕುಳಿತಿದ್ದಾರೆಂದು ಆರೋಪಿಸಿದರು. ಮುಖಂಡ ರಫೀಕ್ ರಕ್ಕಸಗಿ ಮಾತನಾಡಿ ಮರೋಳ ಏತ ನೀರಾವರಿ ಕ್ಯಾನೆಲ್ನಿಂದ ಈ ರಸ್ತೆಗೂಂಟ ನೀರು ಹರಿದು ರಸ್ತೆ ಮೇಲೆ ಸಂಚರಿಸಲು ದಿನವೀಡೀ ಕಷ್ಟಪಡಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಈ ರಸ್ತೆ ಅಭಿವೃದ್ದಿ ಪಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವದೆಂದು ಅವರು ಎಚ್ಚರಿಸಿದರು. ಎಂ.ಕೆ.ಮುಜಾವರ, ವೈ.ಎಸ್. ಚಲವಾದಿ, ಎ.ಎಸ್. ಚಲವಾದಿ, ಮಲ್ಲಿಕಾರ್ಜುನ ಹಾದಿಮನಿ, ಸಿ.ಜಿ. ಪಾಟೀಲ, ವೈ.ಎಚ್. ವಾಲಿಕಾರ,ಯಲ್ಲಪ್ಪ ಹಾದಿಮನಿ, ಯಲ್ಲಪ್ಪ ಅಂಬಿಗೇರ, ಬಿ.ಆರ್. ಖೈರವಾಡಗಿ, ಶಾಂತಗೌಡ ಗೌಡರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.