ದಲಿತ ರಕ್ಷಣಾ ವೇದಿಕೆಯಿಂದ ಎ.ಸಿ.ಎಫ್.ಗೆ ಮನವಿ
ಮುಂಡಗೋಡ:ಕಾತೂರ ಅರಣ್ಯ ವಲಯದ ಬದನಗೋಡ(ಸ.ನಂ.96)ದಲ್ಲಿ ಆರು ಎಕರೆ ಅರಣ್ಯ ಅತಿಕ್ರಮಣ ಜಮೀನನ್ನು ದಲಿತ ಸಮುದಾಯದ ಮೂರು ಕುಟುಂಬಗಳು ಸುಮಾರು 30 ವರ್ಷದಿಂದ ಅರಣ್ಯ ಅತಿಕ್ರಮಣ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯವರು ಎಸಿಎಫ್ ಎಸ್.ಎಸ್.ವಾಲಿ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸಮುದಾಯದವರಿಗೆ ಜಿಪಿಎಸ್ ಮಾಡಿಸಿ ಕೂಡಲೇ ನ್ಯಾಯ ದೊರಕಿಸಿ ಕೊಡಬೇಕು. ಒಂದು ವೇಳೆ ದಲಿತ ಸಮುದಾಯದವರಿಗೆ ನ್ಯಾಯ ಸಿಗದೇ ಹೋದರೆ ಅರಣ್ಯ ಇಲಾಖೆ ಕಚೇರಿ ಎದುರು ನಮ್ಮ ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರೆಲ್ಲರೂ ಅನ್ಯಾಯಕ್ಕೊಳಗಾದ ಕುಟುಂಬದವರೊಂದಿಗೆ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ಚಿದಾನಂದ ಹರಿಜನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರ್ಟಿನ್ ಬಳ್ಳಾರಿ, ತಾಲೂಕಾ ಅಧ್ಯಕ್ಷರಾದ ಶಿವಾನಂದ ಮುಡಸಾಲಿ, ಮುಖಂಡರಾದ ಹನುಮಂತ ಆರೆಗೊಪ್ಪ, ಯಲ್ಲವ್ವ ಭೋವಿ, ಕಸ್ತೂರಿ ವಾಲಿಕಾರ ಮುಂತಾದವರು ಇದ್ದರು.