ಗಿಣಿಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೇಳುವರಿಗೆ ರಕ್ಷಣೆ ನೀಡುವಂತೆ ಮನವಿ
ಬಳ್ಳಾರಿ,ಮಾ.15-ಕಳೆದ ನೂರಾರು ವರ್ಷಗಳಿಂದಲೂ ಬುಡುಬುಡಿಕೆ, ಗೋಂಧಳಿ ಸಮುದಾಯದ ಜನರು ಗಿಣಿಶಾಸ್ತ್ರ, ಕವಡೆ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೇಳುವ ಮೂಲಕ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂತವರಿಗೆ ರಕ್ಷಣೆ ಒದಗಿಸಬೇಕೆಂದು ಗೋಂಧಳಿ ಸಮಾಜದ ಮುಖಂಡರು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಅವರಿಗೆ ಮನವಿ ಮಾಡಿದ್ದಾರೆ. ರಾಜೇಶ್ವರಿ ನಗರ ಗೋಂಧಳಿ ಸಮಾಜದ ಮುಖಂಡರಾದ ಲಕ್ಷ್ಮಣರಾವ್ ವಾಘಮೋರೆ ಅವರ ನೇತೃತ್ವದಲ್ಲಿ ಹಿರಿಯರಾದ ಡಾ.ಎಸ್.ಎನ್.ಶಾಸ್ತ್ರಿ, ವಿ.ನಲ್ಲಾರೆಡ್ಡಿ, ವಿಶ್ವನಾಥ ಶಾಸ್ತ್ರಿ, ಗಜೇಂದ್ರ ಜೋಷಿ, ಪಾಂಡುರಂಗ ವಾಕೋಡೆ, ನಾಗರಾಜ ವಾಕೋಡೆ ಸೇರಿದಂತೆ ಸಮುದಾಯದ ಯುವಕರು ಈ ಮನವಿಯನ್ನು ನೀಡಿದ್ದಾರೆ.
ಬಡತನದಿಂದಾಗಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹೆಚ್ಚು ಶಿಕ್ಷಣ ಓದಲು ಸಾಧ್ಯವಾಗುತ್ತಿಲ್ಲ. ಓದಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ಅನಿವಾರ್ಯವಾಗಿ ಕುಲ ಕಸುಬಾದ ಜ್ಯೋತಿಷ್ಯ ವೃತ್ತಿಯನ್ನೇ ಅವಲಂಬಿಸಿ ಜೀವನ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ನಿಗಮದಿಂದ ಲಭಿಸುವ ಸೌಲಭ್ಯಗಳನ್ನು ನೀಡಬೇಕು. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಅನುದಾನ ಕೊಡಿಸಬೇಕು. ಬೆಂಗಳೂರು, ಮಂಗಳೂರು ಸೇರಿದಂತೆ ನಾನಾ ಕಡೆಗೆ ಅಲೆಮಾರಿಗಳಾಗಿ ತಿರುಗುವ ನಮ್ಮ ಸಮುದಾಯದ ಜನರು ಗಿಣಿಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೇಳಿಕೊಂಡು ಜೀವನ ಮಾಡುತ್ತಿದ್ದಾರೆ. ಇಂಥವರ ಮೇಲೆ ಏಕಾಏಕಿ ದಾಳಿ ಮಾಡುವ ಇಲಾಖೆಗಳ ಅಧಿಕಾರಿಗಳು ಹೊಟ್ಟೆಪಾಡಿಗಾಗಿ ಆಧಾರವಾಗಿರುವ ಗಿಣಿಗಳನ್ನೇ ಕಸಿದುಕೊಂಡು ವಾಪಸ್ಸು ಕಳುಹಿಸಿಕೊಡುತ್ತಿದ್ದಾರೆ. ಅರಣ್ಯ ಇಲಾಖೆ ಕಾಯ್ದೆ ಸರಳೀಕರಣಗೊಳಿಸಿ ಗಿಣಿ ಶಾಸ್ತ್ರ ಹೇಳಲು ಸರ್ಕಾರದಿಂದಲೇ ಪರವಾನಿಗೆ ನೀಡಲು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಲ್ಲಿ ವಿನಂತಿಸಿಕೊಂಡಿದ್ದಾರೆ. ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷರಾದ ಪ್ರೊ.ಕೆ.ಎಂ.ಜಯರಾಮಯ್ಯ ಮತ್ತು ಗೋಂಧಳಿ ಮಹಾಸಮಿತಿಯ ಸಂಸ್ಥಾಪಕರಾದ ತುಕಾರಾಮ ಸೂರ್ವೆ, ಸಂಚಾಲಕರಾದ ವೀರೇಶರಾವ್ ಪಾಚಂಗೆ ನಿರ್ದೇಶನದ ಮೇರೆಗೆ ಈ ಮನವಿ ನೀಡಲಾಗಿದೆ. ಈ ಸಂದರ್ಭದಲ್ಲಿ ತುಳಸಿದಾಸ ಸಿಂದೆ ಮತ್ತು ಪುಂಡಲೀಕ್ ಸಿಂಧೆ ಇನ್ನಿತರರು ಇದ್ದರು.