ಬರ ಘೋಷಣೆಗೆ ಆಗ್ರಹಿಸಿ ಮನವಿ
ತಾಳಿಕೋಟಿ: ಜೂನ್ ತಿಂಗಳು ಅಂತ್ಯಗೊಂಡರೂ ಇಲ್ಲಿಯವರೆಗೆ ಮುಂಗಾರು ಮಳೆ ಸುರಿಯದೆ ಇರುವುದರಿಂದ ರೈತಾಪಿ ಜನರು ತೀವ್ರ ಆತಕಂಕ್ಕೆ ಒಳಗಾಗಿದ್ದು, ಸಾಲ-ಸೂಲ ಮಾಡಿ ಬಿತ್ತನೆಗಾಗಿ ಬೀಜ-ಗೊಬ್ಬರ ಖರೀದಿಸಿದ ಅನ್ನದಾತರಿಗೆ ದಾರಿಕಾಣದಂತಾಗಿದೆ. ಅವರಿಗೆ ಸೂಕ್ತ ಪರಿಹಾರ ಒದಗಿಸಲು ಇಡೀ ಜಿಲ್ಲೆ ವಿಶೇಷವಾಗಿ ಈ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಕೀರ್ತಿ ಚಾಲಕರಿಗೆ ಮನವಿ ಸಲ್ಲಿಸಿದರು.
ತಾಲೂಕು ತಹಶಿಲ್ದಾರ ಕಛೇರಿಗೆ ಭೇಟಿ ನೀಡಿದ ರೈತಪರ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಅವರಿಗೆ ಮಳೆ ಬಾರದೆ ಇರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯಗಳ ಕುರಿತು ತಿಳಿಸಿದರು. ಕಳೆದ 3-4 ವರ್ಷಗಳಿಂದ ರೈತರು ತುಂಬಿದ ಫಸಲ್ ಭೀಮಾಯೋಜನೆಯ ವಿಮೆಯ ಹಣವು ಸರಿಯಾಗಿ ರೈತರಿಗೆ ಸಿಕ್ಕಿಲ್ಲ ಮೇಲೆ ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ತಿವೃ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಿ ಧೈರ್ಯ ತುಂಬುವ ಅಗತ್ಯ ಇದೆ. ಇಲ್ಲದೆ ಹೋದರೆ ಅದು ರೈತರ ಆತ್ಮಹತ್ಯಗಳಿಗೆ ಅವಕಾಶ ಮಾಡಿಕೊಡುವ ಸಾದ್ಯತೆ ಇದೆ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಒಂದು ವೇಳೆ ಶೀಘ್ರ ತಿರ್ಮಾನ ತೆಗೆದುಕೊಳ್ಳದೆ ಹೋದಲ್ಲಿ ಮುಂದೆ ಉಗ್ರಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ತಾಲೂಕ ರೈತ ಸಂಘದ ಅದ್ಯಕ್ಷ ಶ್ರೀಶೈಲ ವಾಲೀಕಾರ ಕಲಿಕೇರಿ, ಹೋಬಳಿ ಘಟಕದ ಅದ್ಯಕ್ಷ ಮಹಿಬೂಬಪಾಶಾ ಮನಗೂಳಿ, ಮುಖಂಡರಾದ ಹಣಮಂತ ವಡ್ಡರ, ದೇವೀಂದ್ರಪ್ಪಗೌಡ ಪಾಟೀಲ, ಲಿಂಗರಾಜ ಮೇಟಿ ಮತ್ತಿತರಿದ್ದರು