ಬಸವಣ್ಣನವರ ಚರಿತ್ರೆಗೆ ಧಕ್ಕೆ ತರುವ ಲೋಪದೋಷ ಸರಿಪಡಿಸಲು ಮನವಿ
ಲೋಕದರ್ಶನ ವರದಿ
ಮುಂಡಗೋಡ:ಶಿಕ್ಷಣ ಇಲಾಖೆಯನ್ನು ಸೀಮಿತ ಧರ್ಮಿಯವಾಗಿ ಮಾಡುತ್ತಿರುವುದನ್ನು ಖಂಡಿಸಿ, ಪಠ್ಯದಲ್ಲಿ ಕೋಮುವಾದ ಹರಡುವ ವ್ಯಕ್ತಿಗಳ ಚರಿತ್ರೆಯನ್ನು ಕೈ ಬಿಡುವ ಹಾಗೂ ಹಳೇಯ ಪಠ್ಯ-ಪುಸ್ತಕಗಳನ್ನು ಮುಂದುವರಿಸುವಂತೆ ಕೋರಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದವರು ತಹಶೀಲ್ದಾರ ಶ್ರೀಧರ ಮುಂದಲಮನಿ ಅವರ ಮೂಲಕ ರಾಜ್ಯಪಾಲರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಚತುರ್ವರ್ಣ ತತ್ವ ಸಿದ್ಧಾಂತಗಳನ್ನು ಚತುರ್ವರ್ಣ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಬಸವಣ್ಣನವರ ಜೀವನ ಚರಿತ್ರೆಯ ಪಾಠಗಳನ್ನು ಈಗಿನ ಪಠ್ಯ-ಪಸ್ತಕ ಪರಿಷ್ಕರಣಾ ಸಮಿತಿಯವರು ಸಂಕ್ಷಿಪ್ತ ರೀತಿಯಲ್ಲಿ ಅವರ ತತ್ವ ಸಿದ್ಧಾಂತಗಳಿಗೆ ಮಾರಕವಾಗುವಂತೆ ಪಾಠಗಳನ್ನು ಸೃಷ್ಟಿಸಿದ್ದಾರೆ. ಅದರಂತೆ ಕುವೆಂಪು ಮತ್ತು ಅಂಬೇಡ್ಕರ ಅವರನ್ನೂ ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನು ಪಠ್ಯ-ಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಮಾಡಿದರವನ್ನು ಆ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿದ್ದಾರೆ. ಬಸವಣ್ಣನವರನ್ನು ಕುರಿತು 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಒಂದು ಪಾಠದಲ್ಲಿ ಅವರ ಚರಿತ್ರೆಗಳಿಗೆ ಧಕ್ಕೆ ತರುವ ಬಸವಣ್ಣನವರು ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು, ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗಧೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂಬ ಲೋಪ-ದೋಷಗಳು ಸೇರಿಕೊಂಡಿವೆ. ಈ ಅಂಶಗಳು ಬಸವ ತತ್ವ ಅನುಯಾಯಿಗಳಿಗೆ ತುಂಬಾ ನೋವು ಉಂಟು ಮಾಡಿದೆ.
ಹೀಗೆ ಇನ್ನೂ ಅನೇಕ ಲೋಪ-ದೋಷಗಳನ್ನು ಸರಿಪಡಿಸಬೇಕಾಗಿದೆ. ಕಾರಣ ಕರ್ನಾಟಕದಲ್ಲಿ ಅನೇಕ ನುರಿತ ಶಿಕ್ಷಣ ತಜ್ಞರನ್ನು ಸಮಿತಿಯಲ್ಲಿ ಸೇರಿಸಿ ಸರಿಯಾದ ರೀತಿಯಲ್ಲಿ ಬಸವಣ್ಣನವರು ಹೋರಾಡಿ ಕಟ್ಟಿದ ಜಾತಿ ನಿರ್ಮೂಲನಾ ಸಮಾಜವನ್ನು ಹಾಗೂ ಸಕಲ ಪ್ರಾಣಿಗಳ ಮೇಲೆ ದಯೆ ತೋರುವ ಆಧ್ಯಾತ್ಮಿಕ ಭಕ್ತಿ-ಭಾವದ ತಳಹದಿಯ ಮೇಲೆ ವಚನ ಸಾಹಿತ್ಯದ ಮುಖಾಂತರ ಸಮಾನಾಂತರ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ. ಅಂತವರ ಚರಿತ್ರೆಯನ್ನು ಮುಂದಿನ ಯುವ ಪೀಳಿಗೆಗೆ ಸಮಾಜಕ್ಕೆ ಹಾಗೂ ದೇಶಕ್ಕೆ ಪೂರಕವಾಗುವಂತೆ ವಚನಗಳನ್ನು ಆಧಾರವಾಗಿಟ್ಟುಕೊಂಡು ಅವರ ಚರಿತ್ರೆಗೆ ಯಾವುದೇ ಧಕ್ಕೆ ಆಗದಂತೆ ಪಠ್ಯ ಪುಸ್ತಕಗಳನ್ನು ಹಾಗೂ ಅವರ ಸಾಹಿತ್ಯವನ್ನು ರಚಿಸುವಂತಾಗಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಲ್ಲೇಶ ಹಳಕಟ್ಟಿ, ಶರಣ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಬಸವರಾಜ ಒಶಿಮಠ, ಮಹದೇಶ್ವರ ಲಿಂಗದಾಳ, ಬಸವರಾಜ ನಡುವಿನಮನಿ, ಆರ್.ಜೆ.ಬೆಳ್ಳೆನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.