ಆಪರೇಟರ್ಗಳು, ಜಿಲ್ಲಾ ಸಮಾಲೋಚಕರನ್ನು ಕರ್ತವ್ಯದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಮನವಿ
ಮುಂಡಗೋಡ: ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್ಗಳು, ಜಿಲ್ಲಾ ಸಮಾಲೋಚಕರನ್ನು ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಡ ಕಛೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರ ಸಂಘದವರು ಶನಿವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರಗೆ ಮನವಿ ಸಲ್ಲಿಸಿದರು.
ಸುಮಾರು ಹತ್ತು ವರ್ಷಗಳಿಂದ ರಾಜ್ಯಾದ್ಯಂತ ನಾಡಕಛೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್, ಜಿಲ್ಲಾ ಸಮಾಲೋಚಕರು ಯಾವುದೇ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006 ರ ನೆಮ್ಮದಿ ಯೋಜನೆಯಿಂದ ಈಗಿನ ಅಟಲ್ ಜೀ ಯೋಜನೆವರೆಗೆ ಸತತವಾಗಿ 14 ವರ್ಷಗಳ ಕಾಲ ಕಂದಾಯ ಇಲಾಖೆಯ ಅಟಲ್ ಜೀ ಕೇಂದ್ರಗಳಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತ ಬಂದಿದ್ದೇವೆ. ನಮ್ಮೆಲ್ಲರ ಪರಿಶ್ರಮದಿಂದಾಗಿ ರಾಜ್ಯದ ಪರವಾಗಿ ಆಯುಕ್ತರು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರ ನಾಡ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವುಗಳು ಘನ ಸರ್ಕಾರದ ವಿವಿಧ ಯೋಜನೆಗಳು, ಹಲವಾರು ಹೊಸ ಹೊಸ ಸೇವೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಜನಸ್ನೇಹಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ನಾವು ಮೂಲಕ ಜನರ ಜೀವನಾಡಿಯಾಗಿರುವುದರಿಂದ ಸೇವೆ ನೀಡುವುದರಲ್ಲಿ ಸಾರ್ವಜನಿಕ ಪ್ರಶಂಸೆ ಮೆಚ್ಚುಗೆ ಪಾರದರ್ಶಕತೆಗೆ ಹೆಸರುವಾಸಿಗಿದ್ದು, ಇದರ ಜೊತೆಗೆ ಕೋವಿಡ್ 19 ಮಹಾ ಮಾರಿ ತುರ್ತು ಸಂದರ್ಭದಲ್ಲಿ ಪ್ರಂಟ್ ಲೈನ್ ವಾರಿಯರ್ಸ ಆಗಿ ಟೋಲ್, ತಾಲೂಕು ಕಛೇರಿ ಮತ್ತು ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಂ ಏರ್ ಪೋರ್ಟ ಸ್ಥಳಿಯ ಮಟ್ಟದ ಚುನಾವಣೆಯಿಂದ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಬೆಳೆ ಸಮೀಕ್ಷೆ ಕೆಲಸ ಕೂಡ ನಿರ್ವಹಿಸಿದ್ದೇವೆ.
ನಮ್ಮ ಸಾಮರ್ಥ್ಯ ಜನಪರ ಸೇವೆಯನ್ನು ಮೆಚ್ಚಿ ಆಯೋಗ 2 ಅವರು ಇನ್ನೂ ಹೆಚ್ಚಿನದಾಗಿ ಸರ್ಕಾರದ ವಿವಿಧ 800 ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದಿಂದಲೇ ನೀಡಬೇಕೆಂದು ಘನ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಸತತವಾಗಿ 14 ವರ್ಷಗಳಿಂದ ನೆಮ್ಮದಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅಲ್ಪ ಮೊತ್ತದ ವೇತನವನ್ನು ಪಡೆದು ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಬಂದಿರುವ ರಾಜ್ಯದ ಸುಮಾರು 1222 ಆಪರೇಟರ್ ಗಳು 42 ಜಿಲ್ಲಾ ಸಮಾಲೋಚಕರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದು, ವಯೋಮಿತಿ ಮೀರಿ ನಮ್ಮೆಲ್ಲರ ಜೀವನ ದುಸ್ತರವಾಗಿದೆ. ಹೀಗಿರುವಾಗ ಸರ್ಕಾರದಿಂದ ಸಾರ್ವಜನಿಕ ಸಲುವಾಗಿ ಪ್ರಾರಂಬಿಸುವ ಯಾವುದೇ ಜನಪರ ಯೋಜನೆಗಳು ಭವಿಷ್ಯದ ದೃಷ್ಟಿಯಿಂದ ನಮಗೆ ತೊಂದರೆಯಾಗದಂತೆ ಜನ ಮೆಚ್ಚುಗೆಗೆ ಪಾತ್ರವಾಗಿರುವ ಅಟಲ್ ಜೀ ಸೇವೆಗಳು ಯಾವುದೇ ರೀತಿಯಿಂದ ಸ್ಥಗಿತಗೊಳ್ಳದಂತೆ ಅನುಷ್ಠಾನಗೊಳಿಸಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗದಂತೆ ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆಯನ್ನು ನೀಡಿ ಇನ್ನು ಹೆಚ್ಚಿನ ಸೇವೆ ನೀಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸೋಮೇಶ್ವರ ಕುರ್ಡೇಕರ, ತುಕಾರಾಮ ಪಾಟೀಲ, ಸವಿತಾ ನಾಯ್ಕ, ಮಂಜುನಾಥ ಮಾವುರ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.