ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಬಳ್ಳಾರಿ 24: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಬಳ್ಳಾರಿಯ ಕನಕದುರ್ಗಮ್ಮ ಬಡಾವಣೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಎನ್ಎಫ್ಆರ್ಆರ್ಆರ್ಬಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂ. ಗಣಪತಿ ಹೆಗಡಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘವು ತಮ್ಮ ಸದಸ್ಯರಿಗೆ ಹಲವಾರು ಸವಲತ್ತುಗಳನ್ನು ಕೊಡಿಸಿಕೊಡಲು ಯಶಸ್ವಿಯಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಹಲವಾರು ಸೌಲಭ್ಯಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ಇನ್ನೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಕರ್ನಾಟಕದಲ್ಲಿ ನಿವೃತ್ತರಾದ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕಿನ ವತಿಯಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸಂಘವು ನಿರಂತರ ಪ್ರಯತ್ನಿಸುತ್ತಿರುವುದಾಗಿ, ಇಂತಹ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಎಲ್ಲಾ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು. ಇದೇ ರೀತಿ ಮುಂದಿನ ದಿನಗಳಲ್ಲೂ ಸಹ ಎಲ್ಲರನ್ನೂ ಒಗ್ಗಟ್ಟಿನಿಂದ ಕೂಡಿಸಿಕೊಂಡು ಹೋಗಲು ಕರೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಂಗಪ್ಪ ಪತ್ತಾರ್ ಅವರು ಕಳೆದ ಮಹಾಸಭೆಯಿಂದ ಇಲ್ಲಿಯವರೆಗಿನ ವರದಿಯನ್ನು ಓದಿ ಮಹಾಸಭೆಯ ಅಂಗೀಕಾರಕ್ಕೆ ಮಂಡಿಸಿದರು. ಈ ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಸಂಘದ ಕೋಶಾಧಿಕಾರಿಗಳಾದ ಭೀಮಸೇನ ಅವರು ಕಳೆದ ಮಹಾಸಭೆಯಿಂದ ಇಲ್ಲಿಯವರೆಗಿನ ಸಂಘದ ಲೆಕ್ಕಪತ್ರಗಳನ್ನು ಓದಿ ಮಹಾಸಭೆಯ ಅಂಗೀಕಾರಕ್ಕೆ ಮಂಡಿಸಿದರು. ಈ ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮೊದಲಿಗೆ ಸಭೆಯು ಕಳೆದ ವರ್ಷದಿಂದ ಇಲ್ಲಿಯವರೆಗೆ ನಿಧನರಾದ ಹಲವಾರು ಕಾರ್ಮಿಕ ಮುಖಂಡರಿಗೆ ಹಾಗೂ ವಿವಿಧ ನಾಯಕರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಸಭೆಯಲ್ಲಿ ನೀರೀಕ್ಷೆಗೂ ಮೀರಿ 300ಕ್ಕೂ ಅಧಿಕ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು. ಸಭೆಯು ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸುತ್ತಾ ನಡೆಸಿರುವುದು ವಿಶೇಷವಾಗಿತ್ತು.