ಸಹಾಯಕಿ ಇಲ್ಲದ ನೇಗಿನಹಾಳ ಗ್ರಾಮದ ಅಂಗನವಾಡಿ ಕೇಂದ್ರ
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನ ನಾಗರೀಕರ ಪಾಲಕರ ಕೆಂಗಣ್ಣಿಗೆ ಗುರಿ
ಬೈಲಹೊಂಗಲ 20: ಸರ್ಕಾರ ಒಂದು ಕಡೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ನೀಡುವ ಸಲುವಾಗಿ ಅಂಗನವಾಡಿ ಕೇಂದ್ರಗಳನ್ನು ತೆರೆದರೆ ಇತ್ತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ತಾಲೂಕಿನ ನೇಗಿನಹಾಳ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 277 ಸಹಾಯಕಿ ಇಲ್ಲದೇ ನರಕಯಾತನೆ ಅನುಭವಿಸುತ್ತಿರುವುದಕ್ಕೆ ಅಧಿಕಾರಿಗಳು ವಾರ್ಡಿನ ನಾಗರೀಕರ ಪಾಲಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಗ್ರಾಮದಲ್ಲಿ ಸುಮಾರು 10 ಅಂಗನವಾಡಿ ಕೇಂದ್ರಗಳಿದ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಒಂದರದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆಯ 277 ನಡೆಯುತ್ತಿದ್ದು ವಾರ್ಡ 3 ಗಾಡದ ಒಣಿಯ 60 ಮಕ್ಕಳ ಸಂಖ್ಯೆ ಹೊಂದಿದೆ.
ಕಳೆದ ಹತ್ತು ವರ್ಷಗಳಿಂದ ಸಹಾಯಕಿಯನ್ನು ಕರ್ತವ್ಯಲೋಪ ಎಸಗಿದ್ದರಿಂದ ಅವರನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಅಂದಿನಿಂದ ಇಂದಿನವರೆಗೂ ಸಹಾಯಕಿಯಿಲ್ಲದೇ ಅಂಗನವಾಡಿ ಶಿಕ್ಷಕಿಯೇ ಎಲ್ಲ ಕಾರ್ಯವನ್ನು ನಿರ್ವಹಿಸುತ್ತಿದ್ದಾಳೆ. ಇದರಿಂದ ಮಕ್ಕಳಿಗೆ ಪಾಠ ಹೇಳಿ ಕೊಡಲು ತುಂಬಾ ತೊಂದರೆಯಾಗುತ್ತಿದೆ. ಅಧಿಕಾರಿಗಳು ಪ್ರತಿನಿತ್ಯ ಒಂದಿಲ್ಲೊಂದು ಮಾಹಿತಿ ಕೇಳುತ್ತಾರೆ. ಇದನ್ನು ನೀಡದಿದ್ದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇತ್ತ ಸಹಾಯಕಿಯಿಲ್ಲದೇ ಕಳೆದ ಹತ್ತು ವರ್ಷಗಳಿಂದ ಅಂಗನವಾಡಿ ಕೇಂದ್ರ ನಡೆಸುತ್ತ ಬಂದಿದ್ದು ಶಿಕ್ಷಕಿಯ ಗೋಳು ಯಾರೂ ಕೇಳದಂತಾಗಿದೆ.
ಅಂಗನವಾಡಿ ಶಿಥಿಲಾವಸ್ಥೆ ಇರುವುದರಿಂದ ಛಾವಣಿ ಹಂಚು ಅಲ್ಲಲ್ಲಿ ಕಿತ್ತು ಹೋಗಿದ್ದು, ಮಳೆಗಾಲದಲ್ಲಿ ನೀರು ಒಳಗಡೆ ಬರುತ್ತಿದೆ. ಅಲ್ಲದೇ ಸುಸಜ್ಜಿತವಾದ ಕಿಟಕಿ, ಬಾಗಿಲು ಇಲ್ಲದ ಕಾರಣ ಪ್ರತಿನಿತ್ಯ ಮಕ್ಕಳಿಗೆ ವಿತರಿಸುತ್ತಿರುವ ಆಹಾರ ಧಾನ್ಯ ಕಳ್ಳರ ಪಾಲಾಗುತ್ತಿದೆ. ಈ ಕುರಿತು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಿಕ್ಷಕಿ ಪತ್ರಿಕೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡು ಅಧಿಕಾರಿಗಳ ವಿರುದ್ದ ಹರಿಹಾಯುತ್ತಿದ್ದಾರೆ. ಪತ್ರಿನಿತ್ಯ ಸರ್ಕಾರ ಒಂದೊಂದು ಯೋಜನೆ ಜಾರಿಗೆ ತರುತ್ತಿದ್ದು ಇದನ್ನು ಮಾಹಿತಿ ಸಂಗ್ರಹಿಸಲು ಹೇಳುತ್ತಾರೆ. ಮಾಹಿತಿ ಸಂಗ್ರಹಿಸಬೇಕೋ, ಮಕ್ಕಳಿಗೆ ಪಾಠ ಹೇಳಿಕೊಡಬೇಕೋ ಎನ್ನುವುದು ಗೊತ್ತಾಗುತ್ತಿಲ್ಲ.
ಸುಸಜ್ಜಿತವಾದ ಅಂಗನವಾಡಿ ಕಟ್ಟಡ ಇಲ್ಲದ ಕಾರಣ ಜುಜೂಕೋರರು, ಕುಡುಕರಿಗೆ ಹೇಳಿ ಮಾಡಿಸಿದ ಪುಕ್ಕಟ ತಾಣವಾಗಿದೆ. ಕುಡಿದು ಸಾರಾಯಿ ಬಾಟಲಿ, ಇಸ್ಪಿಟ ಎಲೆ, ಗುಟಕಾ ಎಲ್ಲೆಂದರದಲ್ಲಿ ಕಂಡು ಬರುತ್ತಿದೆ.
ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಂಗನವಾಡಿ ಕೇಂದ್ರ 277 ಕ್ಕೆ ಸುಸಜ್ಜಿತವಾದ ಕಟ್ಟಡ, ಸಹಾಯಕಿ ನೇಮಿಸಬೇಕೆಂದು ವಾರ್ಡಿನ ನಾಗರೀಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೇ ಗ್ರಾಪಂ.ಕಾರ್ಯಾಲಯಕ್ಕೆ ಬೀಗ ಜಡಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನೇಗಿನಹಾಳ ಗ್ರಾಮದ 3 ನೇ ವಾರ್ಡಿನ ಗಾಡದ ಒಣಿಯಲ್ಲಿರುವ ಅಂಗನವಾಡಿ ಕೇಂದ್ರ 277 ಕ್ಕೆ ಸುಸಜ್ಜಿತವಾದ ಕಟ್ಟಡ, ಸಹಾಯಕಿಯನ್ನು ನೇಮಿಸಬೇಕು.
ಶಕುಂತಲಾ ಇಂಚಲ
ಅಂಗನವಾಡಿ ಶಿಕ್ಷಕಿ.
ಅಂಗನವಾಡಿ ಸಹಾಯಕಿ ನ್ಯಾಯಾಲಯದ ಮೊರೆ ಹೋಗಿದ್ದು ಈ ಕುರಿತು ನ್ಯಾಯ ಇತ್ಯರ್ಥವಾದಲ್ಲಿ ಸಹಾಯಕಿ ಹುದ್ದೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಯೋಜಿಸಲಾಗವುದು, ಅಂಗನವಾಡಿಯಲ್ಲಿ ಆಹಾರ ಸಾಮಾಗ್ರಿ ಕಳ್ಳತನವಾಗುವ ಕುರಿತು ಶಿಕ್ಷಕಿಗೆ ದೂರು ನೀಡುವಂತೆ ಸಲಹೆ ನೀಡಿದರೂ ಸಹ ಅವಳು ದೂರು ನೀಡಲು ಮುಂದಾಗುತ್ತಿಲ್ಲ.
ರೇವತಿ ಹೊಸಮಠ
ಸಿಡಿಪಿಓ ಬೈಲಹೊಂಗಲ