ಬಳ್ಳಾರಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವಿವಿಧ ಬೇಡಿಕೆ ಈಡೇರಿಸಲು ಮನವಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವಿವಿಧ ಬೇಡಿಕೆ ಈಡೇರಿಸಲು ಮನವಿ

ಬಳ್ಳಾರಿ 24: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಸಂಘಟನೆಯ ಕರೆಯ ಮೇರೆಗೆ ದಿ. 24ರಂದು ಪ್ರತಿಭಟನಾ ದಿನಾಚರಣೆಯನ್ನು ಹಮ್ಮಿಕೊಂಡು, ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಕುರಿತಾದ ಮನವಿ ಪತ್ರ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮುಖ್ಯ ಬೇಡಿಕೆಗಳಾದ ನಿವೃತ್ತಿಯಾದವರಿಗೆ ಇಡಿಗಂಟು ಪಾವತಿ ಕೊಡದಿರುವ ಬಗ್ಗೆ 2011 ರಿಂದ ಎನ್‌.ಪಿ.ಎಸ್‌. (ಲೆಟ್) ಜಾರಿಗೆ ಬಂದಾಗಲಾಯ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ರೂ. 50,000/- ಹಾಗೂ ರೂ. 30,000/- ಗಳನ್ನು ಪಾವತಿ ಮಾಡಲಾಗಿದೆ. ಆದರೆ ಅದರಲ್ಲೂ 432 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1036 ಅಂಗನವಾಡಿ ಸಹಾಯಕಿಯರು ಒಟ್ಟು 1468 ಮಂದಿಗೆ ನಿವೃತ್ತಿ ಹೊಂದಿದ್ದರೂ ಇಡಿಗಂಟು ಹಣ ಪಾವತಿಸಿಲ್ಲ. ಈಗಲೂ ಹಣ ಬಿಡುಗಡೆ ಮಾಡಿಲ್ಲ. ವೈದ್ಯಕೀಯ ಹಾಗೂ ಮರಣ ಪರಿಹಾರದ ಹಣ ಬಿಡುಗಡೆಯಾಗದಿರುವ ಬಗ್ಗೆ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ (2016) ಅವಧಿಯಲ್ಲಿ ವೈದ್ಯಕೀಯ ಹಾಗೂ ಮರಣ ಪರಿಹಾರವನ್ನು ತಲಾ ರೂ. 50,000/- ಗಳಿಗೆ ಹೆಚ್ಚಿಸಿದ್ದು, ಸ್ವಾಗತಾರ್ಹ. ಇದನ್ನು ಆರಂಭದಲ್ಲಿ ಜಾರಿ ಮಾಡಲಾಯಿತು. ಆದರೆ 2020-21ನೇ ಸಾಲಿನಲ್ಲಿ ಹಲವು ಕಾರ್ಯಕರ್ತೆಯರು / ಸಹಾಯಕಿಯರು ವೈದ್ಯಕೀಯ ಶಸ್ತ್ರ ಚಿಕಿತ್ಸೆಗೊಳಗಾದರೂ ಹಣ ಬಿಡುಗಡೆಯಾಗಿಲ್ಲ. ಅದೇರೀತಿ ಮರಣ ಹೊಂದಿದ್ದರೂ ಮರಣ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಇದುವರೆಗೂ ಬಾಕಿಯಿರುವ ಬಿಡುಗಡೆಯಾಗಬೇಕಾದ ಹಣದ ಮೊತ್ತ ರೂ. 75 ಲಕ್ಷ. ಸೇವಾ ಹಿರಿತನ ಬಡ್ತಿ: ದೀರ್ಘಾವಧಿ ಸೇವೆ ಸಲ್ಲಿಸಿರುವ ಹಿರಿಯರು ಹಾಗೂ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ / ಹೊಸದಾಗಿ ನೇಮಕಾತಿಯಾದ ಕಿರಿಯರಿಗೆ ಒಂದೇ ಮೊತ್ತದ ಗೌರವ ಧನ ಕೊಡುತ್ತಯಿದ್ದು, ತಾರತಮ್ಯ ಉಂಟಾಗಿದೆ. ಆದ್ದರಿಂದ ಸೇವಾ ಹಿರಿತನದ ಆಧಾರದಲ್ಲಿ ಗೋವಾ ರಾಜ್ಯದ ಮಾದರಿಯಲ್ಲಿ ಗೌರವಧನ / ವೇತನ ಹೆಚ್ಚಳ ಮಾಡುವುದು. ಎಲ್‌.ಕೆ.ಜಿ / ಯು.ಕೆ.ಜಿ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌.ಕೆ.ಜಿ. / ಯು.ಕೆ.ಜಿ. (ಪ್ರಾಥಮಿಕ ಶಿಕ್ಷಣ ತರಗತಿಗಳನ್ನು ಆರಂಭಿಸುವುದು). ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ನೀಡಬೇಕು. ಕಾರ್ಯಕರ್ತೆಯರಿಗೆ ಉತ್ತಮ ತರಬೇತಿ ನೀಡಬೇಕು. ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪತ್ರ ನೀಡುವಂತೆ ಕ್ರಮ ಕೈಗೊಂಡರೆ ಐ.ಸಿ.ಡಿ.ಎಲ್‌. ಯೋಜನೆ ಉಳಿಯುತ್ತದೆ ಹಾಗೂ ಫಲಾನುಭವಿಗಳಿಗೆ ಸಹಾಯವಾಗುತ್ತದೆ. ಸ್ವಯಂ ನಿವೃತ್ತಿ ಯೋಜನೆ : ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಲವಾರು ವರ್ಷಗಳ ಸೇವೆ ಸಲ್ಲಿಸಿ ಅನಾರೋಗ್ಯ ಪೀಡಿತರಾಗಿ (ಕ್ಯಾನ್ಸರ್, ಪೆರಾಲಿಸಿಸ್, ಗ್ಯಾಂಗ್ರೀನ್, ಕಿಡ್ನಿ ವೈಪಲ್ಯ, ದೃಷ್ಠಿ ದೋಷ ಇತ್ಯಾದಿ) ರೋಗಗಳಿಂದ ರಾಜ್ಯಾದ್ಯಂತ ಹಲವಾರು ಕಾರ್ಯಕರ್ತೆಯರು / ಸಹಾಯಕಿಯರು ಸೇವೆ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಹಾಗೂ ಅಪಘಾತದಿಂದ ಶಾಶ್ವತ ಅಂಗವಿಕಲರಾದವರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರುವುದು ಹಾಗೂ ಅವಲಂಬಿತರಿಗೆ ಕೆಲಸ ಕೊಡಬೇಕೆಂದು ವಿನಂತಿ.  

ವೈದ್ಯಕೀಯ ಸೌಲಭ್ಯ: ಹಾಲಿ ಉಚಿತ ವೈದ್ಯಕೀಯ ಸೌಲಭ್ಯ ತುರ್ತಾಗಿ ಕಲ್ಪಿಸುವುದು ತಪ್ಪಿದಲ್ಲಿ ಇ.ಎಸ್‌.ಐ. ಯೋಜನೆ ಜಾರಿಗೆ ತರುವುದು.  

ಸಮವಸ್ತ್ರ: 1 ವರ್ಷ ಮುಗಿಯುತ್ತಿದ್ದರೂ ಸಮವಸ್ತ್ರ ವಿತರಿಸಿಲ್ಲ. ಆ ಬಾಬತು ಹಣ ಏನಾಯಿತು. ಶಿಶುಪಾಲನಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳಿಗೆ ಕೊಡಬಾರದು. ಬೇರೆಡೆಗೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ ಬೇರೆ ಮಹಿಳೆಯರಿಗೆ ಕೆಲಸಗಳನ್ನು ಕೊಡಬಹುದು. ಶಿಶುಪಾಲನಾ ಕೇಂದ್ರಗಳನ್ನು ಮಾಡುವುದನ್ನು ಕೈಬಿಡಬೇಕು. ಅಂಗನವಾಡಿ ಕಾರ್ಯಕರ್ತಯರಿಗೆ ಹಾಗೂ ಸಹಾಯಕಿಯರಿಗೆ ಸ್ಥಾನಪಲ್ಲಟ ಹಾಗೂ ವರ್ಗಾವಣೆಯನ್ನು ರಾಜ್ಯದಲ್ಲಿ ಆಗಬೇಕು. (ಜಂಟಿ ನಿರ್ದೇಶಕರಿಂದ ಆಗುವುದು ಎಂದು ಆದೇಶವನ್ನು ಕೈ ಬಿಡಬೇಕು. ನಮ್ಮ ಜಿಲ್ಲೆ ಉಪನಿರ್ದೇಶಕರಿಗೆ ವರ್ಗಾವಣೆ / ಸ್ಥಾನಪಲ್ಲಟ ಆದೇಶವನ್ನು ಈ ಮುಂಚೆ ಯಾವುದೇ ರೀತಿ ಇದ್ದು, ಅದೇ ಮುಂದುವರೆಯಬೇಕು ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಯಿಂದ ಮನವಿ ಮಾಡುತ್ತಿದ್ದೇವೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎ.ಆರ್‌.ಎಂ.ಇಸ್ಮಾಯಿಲ್ ಮಾತನಾಡಿ ಅಂಗನವಾಡಿ ನೌಕರರು ಸಂಘಟನಾ ಪ್ರಜ್ಞೆ ಮತ್ತು ಒಗ್ಗಟ್ಟಿನಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಬೇಕು. ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ದಿ. 27ರಂದು ಭಾರತ್ ಬಂದ್ ಯಶಸ್ವಿಗೊಳಿಸಲು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. 

ಸಭೆಯನ್ನುದ್ದೇಶಿಸಿ ಆರ್ಕಾಣಿ, ಮಂಗಮ್ಮ, ಯುವಜನ ಫೆಡರೇಷನ್ ಅಧ್ಯಕ್ಷ ಕಟ್ಟೇಬಸವ ಇನ್ನಿತರರು ಮಾತನಾಡಿದರು. ತಾಲ್ಲೂಕು ಸಂಘಟನೆಯ ಮುಖ್ಯಸ್ಥರಾದ ಮೀನಾಕುಮಾರಿ, ಕಲಾವತಿ, ಈರಮ್ಮ ಹಿರೇಮಠ, ರತ್ನಮ್ಮ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ