ಸಾಮಾಜಿಕ ತಳಹದಿಯಲ್ಲಿ ರಾಜಕೀಯ ಮಾಡದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ: ಡಾ. ದುರುಗಪ್ಪ
ಬಳ್ಳಾರಿ 24: ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾಪ್ರಭುತ್ವದ ತಳದಲ್ಲಿ ರಾಜಕೀಯ ಮಾಡಬೇಕು. ಒಂದು ವೇಳೆ ಅದು ಮಾಡದಿದ್ದಲ್ಲಿ ಪ್ರಜಾಪ್ರಭುತಕ್ಕೆ ಉಳಿಗಾಲವಿಲ್ಲ ಎಂದು ವಕೀಲ ಡಾ.ಟಿ.ದುರುಗಪ್ಪ ಅವರು ತಿಳಿಸಿದರು.
ಅವರು ಬಳ್ಳಾರಿ ತಾಲ್ಲೂಕಿನ ಮೋಕ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರದಂದು ಬೆಳಿಗ್ಗೆ ಕನ್ನಡ ವಿಭಾಗದ ರಾಷ್ಟ್ರಕವಿ ಕುವೆಂಪು ವೇದಿಕೆ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ``ಅಂಬೇಡ್ಕರ್ ಮತ್ತು ವರ್ತಮಾನದ ರಾಜಕಾರಣ” ಎಂಬ ವಿಷಯವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ಮೂಲಕ ಅಂಬೇಡ್ಕರ್ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಮೂಲಭೂತ ಬದಲಾವಣೆಗಳನ್ನು ಬಯಸಿದ್ದರು. ಭಾರತದ ರಾಜಕೀಯ ಜೀವನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿಯೂ ಒಬ್ಬ ಮನುಷ್ಯ, ಒಂದು ಮತ ಮತ್ತು ಒಂದು ಮೌಲ್ಯವನ್ನು ಸ್ಥಾಪಿಸಲು ಕನಸು ಕಂಡಿದ್ದರು. ಅದರಂತೆ ಅವರು ಸಂವಿಧಾನದಲ್ಲಿ ತಮ್ಮ ಉಲ್ಲೇಖಿಸಿದ್ದಾರೆ ಎಂದು ನುಡಿದರು.
ಒಂದು ದೇಶದ ಸ್ವಾತಂತ್ರ್ಯ ಎಂದರೆ ಸಾಮಾನ್ಯವಾಗಿ ಆ ದೇಶದ ಜನರ ಸ್ವಾತಂತ್ರ್ಯವನ್ನು ಅರ್ಥವಲ್ಲ. ರಾಜ್ಯದ ಪ್ರಭಾವ ಮತ್ತು ಅಧಿಕಾರವು ಒಂದು ನಿರ್ದಿಷ್ಟ ವರ್ಗದ ಜನರಲ್ಲಿ ಕೇಂದ್ರೀಕೃತವಾಗಿರಬಹುದು. ಭಾರತೀಯ ಸಂವಿಧಾನದ ಘೋಷ ಣೆಯ ಮೊದಲು, ಒಂದು ನಿರ್ದಿಷ್ಟ ವರ್ಗದ ಜನರ ಸ್ಥಾನಮಾನದ ಪರಿಕಲ್ಪನೆಯು ಜನನದ ಮೇಲೆ ಆಧಾರಿತವಾಗಿತ್ತು. ಭಾರತೀಯ ಸಾಮಾಜಿಕ ಜೀವನದ ಜೀವಕೋಶಗಳನ್ನು ಧಾರ್ಮಿಕ ಸಿದ್ಧಾಂತಗಳು ತಿನ್ನುತ್ತಿದ್ದವು ಮತ್ತು ಸಮಾಜವು ಶ್ರೇಣೀಕೃತ ಅಸಮಾನತೆಯನ್ನು ಆಧರಿಸಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ತಮಾನದಲ್ಲಿ ರಾಜಕಾರಣವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಾಗುತ್ತಿದೆ. ಆದ್ದರಿಂದ ಮೌಲ್ಯಾಧಾರಿತ ರಾಜಕಾರಣದ ಅರಿವನ್ನು ಮೂಡಿಸಬೇಕಾಗಿದೆ. ಹೋರಾಟ, ಸಾಮಾಜಿಕ ಕಾಳಜಿಯಿಂದ ರಾಜಕಾರಣಿಗಳು ರಾಜಕೀಯಕ್ಕೆ ಬರಬೇಕಾಗಿದೆ. ಜಾತಿ, ಧರ್ಮ, ಹಣ, ಭಾಷೆ, ಬಣ್ಣಗಳನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಹೊನ್ನೂರಾಲಿ.ಐ ಅವರು ಮಾತನಾಡಿ, ನಮ್ಮ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಮುಂದೆ ಬರಬೇಕು. ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಸಿದ್ದರಾಗಬೇಕೆಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರಕವಿ ಕುವೆಂಪು ವೇದಿಕೆಯವತಿಯಿಂದ ಕುವೆಂಪು ಆಶಯಗಳಿಗೆ ಸಂಬಂಧಿಸಿದಂತೆ ಉಪನ್ಯಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿ ಆ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆಯಬೇಕೆಂದರು.
ವೇದಿಕೆಯ ಮೇಲೆ ಐಕ್ಯೂಎಸಿ ಸಂಚಾಲಕಿ ಶ್ರೀದೇವಿ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಲಿಂಗಮೂರ್ತಿ ಪ್ರಾರ್ಥಿಸಿದರು. ದುರುಗಮ್ಮ ನಿರೂಪಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಬಕಾಡೆ ಪಂಪಾಪತಿ ಸ್ವಾಗತಿಸಿದರು. ಕೊನೆಯಲ್ಲಿ ಭೀಮಕ್ಕ ವಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ.ಟಿ.ದುರುಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.