ಶಿಗ್ಗಾವ್

ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ತಮ್ಮ ಸೇವೆಗೆ ಸದಾ ಸಿದ್ಧ: ಬೊಮ್ಮಾಯಿ

ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ತಮ್ಮ ಸೇವೆಗೆ ಸದಾ ಸಿದ್ಧ: ಬೊಮ್ಮಾಯಿ

ಶಿಗ್ಗಾವಿ 20: ಭಗವಂತ ನನ್ನ ದೇಹವನ್ನು ಶಸ್ತ್ರಚಿಕಿತ್ಸೆ ಮೂಲಕ ನನಗೆ ಪುನರ್ಜನ್ಮವನ್ನು ನೀಡಿ ತಮ್ಮ ಸೇವೆಗೆ ಅಣಿಗೊಳಿಸಿದ್ದು ಕ್ಷೇತ್ರದ ಜನರ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವುದಕ್ಕೋಸ್ಕರ ಗ್ರಾಮ ದೇವಿಯ ಮತ್ತು ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ತಮ್ಮ ಸೇವೆಗೆ ಸದಾ ಸಿದ್ದನಿರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ನಂತರ ಪ್ರಥಮ ಬಾರಿಗೆ ಕ್ಷೇತ್ರದ ಸಾರ್ವಜನಿಕರನ್ನುದ್ದೆಸಿಸಿ ಮಾತನಾಡಿದ ಅವರು, ನಿಮ್ಮನ್ನು ನೋಡಿ ಬಹಳ ಸಂತೋಷವಾಗಿದೆ, ಚುನಾವಣೆ ಬಳಿಕ ಮೊಣಕಾಲು ನೋವಿನ ಚಿಕಿತ್ಸೆಗೆ ಹೋದಾಗ ವೈದ್ಯರು ನನಗೆ ಆಘಾತಕಾರಿಯಾದ ಸುದ್ದಿಯನ್ನು ತಿಳಿಸಿದರು. ಆಗ ನಾನು ಗ್ರಾಮ ದೇವಿಯ ಮತ್ತು ಕ್ಷೇತ್ರದ ಜನರನ್ನು ನೆನೆದು ನನ್ನ ಮನಸ್ಸನ್ನು ಗಟ್ಟಿ ಮಾಡಿ ವೈದ್ಯರ ಸಲಹೆ ಮೇರೆಗೆ ಹೃದಯ ಚಿಕಿತ್ಸೆಯನ್ನು ಮಾಡಿಸಿಕೊಂಡು ಮತ್ತಷ್ಟು ಗಟ್ಟಿಯಾಗಿ ತಮ್ಮ ಸೇವೆ ಮಾಡಲು ಸಜ್ಜಾಗಿದ್ದೇನೆ ಎಂದರು. 

ಕ್ಷೇತ್ರದಲ್ಲಿ ನಾನು ಮಾಡಿದ ಕಾರ್ಯ ಅಲ್ಪ ಇನ್ನೂ ಹೆಚ್ಚು ಕಾರ್ಯಗಳನ್ನ ಮಾಡಬೇಕು ಎನಿಸುತ್ತಿದೆ. ಅಧಿಕಾರದಲ್ಲಿದ್ದಾಗಲೂ ರಾಜಕಾರಣವನ್ನ ನೋಡಿದ್ದೇವೆ, ಅಧಿಕಾರ ಸಿಕ್ಕಾಗ ಪಾವರ್ ರಾಜಕಾರಣ, ಪೀಪಲ್ ರಾಜಕಾರವನ್ನೂ ನಾವು ನೋಡಿದ್ದೇವೆ, ಅಧಿಕಾರದ ಸ್ಥಾನ ಮಾನ ಬಹಳ ದೊಡ್ಡದು, ಅಧಿಕಾರ ಇದ್ದಾಗಲೂ ನಾವು ಜನರನ್ನ ನೋಡೊದ್ದೇವೆ, ಇಲ್ಲದಿದ್ದಾಗಲೂ ಜನರನ್ನು ನೋಡಿದ್ದೇವೆ, ಅಧಿಕಾರ ಇದ್ದಾಗ ನಾವು ನಮ್ಮ ಜನರ ಮನಮುಟ್ಟುವ ಕಾರ್ಯಗಳನ್ನ ಮಾಡಿದ್ದರೆ ನಮ್ಮ ಜೀವನ ಸಾರ್ಥಕವಾಗುತ್ತದೆ, ಜನರ ಹೃದಯದಲ್ಲಿ ಶಾಸ್ವತವಾಗಿ ನಮ್ಮ ಕೆಲಸಗಳು ಉಳಿದಿದ್ದರೆ ಮಾತ್ರ ನಮ್ಮ ಜೀವನ ಸಾರ್ಥಕವೆನಿಸುತ್ತದೆ ಎಂದರು. 

ನನ್ನ ಕ್ಷೇತ್ರದ ಜನ ಸಜ್ಜನರಿದ್ದಾರೆ, ಜಾತ್ಯಾತೀತ ಜನರಿದ್ದಾರೆ, ತಾಲೂಕಿನ ಅಭಿವೃದ್ದಿ ಬಯಸುವ ಜನರಿದ್ದಾರೆ, ಹೀಗಾಗಿ ನನ್ನ ನಡೆ ನುಡಿ ಮೊದಲಿನ ಹಾಗೆಯೇ ಇರಬೇಕು. ಮೊದಲಿಗಿಂತಲೂ ಹೆಚ್ಚು ಅಭಿವೃದ್ಧಿ ಕೆಲಸವನ್ನ ಮಾಡಬೇಕು. ಎಲ್ಲ ಸಮುದಾಯಗಳನ್ನ ಸಮನಾಗಿ ನೋಡುವ ಎಲ್ಲರಿಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿಯಾಗಿದೆ. ನನ್ನ ಕ್ಷೇತ್ರದ ಅಭಿವೃದ್ದಿಗೆ ನನ್ನದೇ ಆದ ಕನಸಿದೆ, ಕೃಷಿ ಉತ್ತಮಗೊಳ್ಳಬೇಕು, ಪೂರಕ ನೀರಾವರಿ, ಗ್ರಾಮಗಳ ಅಭಿವೃದ್ದಿಯಾಗಬೇಕು, ಗ್ರಾಮೀಣ ರಸ್ತೆಗಳು ಹಾಗೂ ಮನೆ ಇಲ್ಲದಂತಹ ಎಲ್ಲ ಬಡವರಿಗೂ ಸೂರನ್ನು ಕಲ್ಪಿಸಿ ಕೊಡುವ ಮಹತ್ವರ ಜವಾಬ್ದಾರಿ ನನ್ನದಾಗಿದೆ ಎಂದು ಹೇಳಿದರು. 

ಪೂರ್ವದಲ್ಲಿ ವಿಶೇಷ ಚೇತನರ ಅನುದಾನದಡಿಯಲ್ಲಿ ತಾಲೂಕಿನ ವಿಶೇಷಚೇತನರಿಗೆ 24 ಯಂತ್ರಚಾಲಿತ ತ್ರಿಚಕ್ರವಾಹನ, 4 ಲ್ಯಾಪ್ ಟಾಪ್, ಅಂದ ವಿದ್ಯಾರ್ಥಿಗಳಿಗೆ 4  ಬ್ರೈಲ್ ಕಿಟ್ ವಿತರಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಸಣ್ಣಪ್ಪ ಬುಳ್ಳಕ್ಕನವರ, ಶಿವಪ್ರಸಾದ ಸುರಗೀಮಠ ಸೇರಿದಂತೆ ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಪುರಸಭೆ ಸದಸ್ಯರು, ಮುಖಂಡರು ಕಾರ್ಯಕರ್ತರು ಇದ್ದರು. 

ಬೊಮ್ಮಾಯಿ ಬಾವುಕ ನುಡಿ : 

ಕ್ಷೇತ್ರದ ಜನರು ನೀಡಿದ ಪ್ರೀತಿ ವಿಶ್ವಾಸವನ್ನು ನೆನೆದು ಮಾತಿನ ಮಧ್ಯದಲ್ಲಿ ಭಾವುಕರಾದ ಬಸವರಾಜ ಬೊಮ್ಮಾಯಿ ಅವರು ನನ್ನ ಜನ್ಮ, ನನ್ನ ಕರ್ಮಭೂಮಿ ಶಿಗ್ಗಾವಿಯೆ ಆಗಿದ್ದು  ಮತ್ತೊಂದು ಜನ್ಮ ನನಗೆ ಏನಾದರೂ ಇದ್ದರೆ ಅದು ಶಿಗ್ಗಾವಿಯೇ ಆಗಿರಲಿ ಎಂದು ಭಾವುಕ ನುಡಿಗಳನ್ನಡಿದರು. 

ಗ್ರಾಮದೇವಿ ಆಶೀರ್ವಾದ ಪಡೆದ ಬೊಮ್ಮಾಯಿ 

ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ನಂತರ ಪ್ರಥಮ ಬಾರಿಗೆ ಶಿಗ್ಗಾವಿಗೆ ಆಗಮಿಸಿದ ಬೊಮ್ಮಾಯಿಯವರು ಗ್ರಾಮದೇವಿ ದೇವಸ್ಥಾನಕ್ಕೆ ಬೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು, ಇದೇ ಸಂದರ್ಭದಲ್ಲಿ ಪಟ್ಟಣದ ನೂರಾರು ಮುಖಂಡರು ಸನ್ಮಾನಿಸಿ ಗೌರವಿಸಿದರು, ಅಲ್ಲಿಯೇ ಹಲವಾರು ಜನರ ಅಹವಾಲುಗಳನ್ನು ಬೊಮ್ಮಾಯಿ ಸ್ವೀಕರಿಸಿ ಬರವಸೆ ನೀಡಿದರು. 


ಸುದ್ದಿ ಓದಿ