ಬಳ್ಳಾರಿ

ಬಳ್ಳಾರಿಯಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಸೋಮಶೇಖರರೆಡ್ಡಿ

ಬಳ್ಳಾರಿಯಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಸೋಮಶೇಖರರೆಡ್ಡಿ

ಬಳ್ಳಾರಿ 05: ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ತಾವು ಸದಾ ಸಿದ್ಧರಿದ್ದು, ಯಾವುದೇ ಸಮಯದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕಂಕಣಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಬಳ್ಳಾರಿ ನಗರದಲ್ಲಿ 5 ಕೋಟಿ ವೆಚ್ಚದ ಬೃಹತ್ ಕನ್ನಡ ಭವನ ನಿರ್ಮಾಣ ಮಾಡುವ ಆಶಯವನ್ನು ತಾವು ಮತ್ತು ತಮ್ಮ ಸಹೋದರ ಜಿ.ಜನಾರ್ಧನರೆಡ್ಡಿಯವರು ಹೊಂದಿರುವುದಾಗಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ತಿಳಿಸಿದರು. 

ಅವರು ಸ್ಥಳೀಯ ಡಾ.ರಾಜಕುಮಾರ್ ರಸ್ತೆ, ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಕನ್ನಡ ಭವನದಲ್ಲಿ ಅಧಿಕಾರ ಹಸ್ತಾಂತರ ಹಾಗೂ ಜಿಲ್ಲಾ ಸಾಹಿತ್ಯ ಭವನದ ಮೊದಲ ಮಹಡಿಯ ಕಟ್ಟಡದ ಕಿರುಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. 

ನನಗೆ ತುಂಬಾ ಸಂತೋಷವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ 5 ವರ್ಷ ಆರು ತಿಂಗಳ ಕಾಲ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಿದ್ದರಾಮ ಕಲ್ಮಠ ಅವರು ಜಿಲ್ಲೆಯಲ್ಲಿ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಹಾಗೂ ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು. 

ಗಡಿಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಸಿದ್ದರಾಮ ಕಲ್ಮಠ ಅವರು ತಮ್ಮ ತಂಡದೊಂದಿಗೆ ಶ್ರಮಿಸಿದ್ದಾರೆ. ಕ್ರಿಯಾಶೀಲ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಸಂಸ್ಕೃತಿ, ನುಡಿ, ಶಿಕ್ಷಣದ ಬೆಳವಣಿಗೆಗೆ ಎಲ್ಲರನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಹೆಗ್ಗಳಿಕೆಯ ಸಂಗತಿ ಎಂದರು. 

ಆಶಯ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೊತ್ತಲಚಿಂತ ಗ್ರಾಮದಿಂದ ಪಶ್ಚಿಮದ ಮೈಲಾರದವರೆಗೆ ನೂರಾರು ಕಡೆ ಸಾಹಿತ್ಯ ಕಾರ್ಯಕ್ರಮಗಳನ್ನು ಕಳೆದ ಐದೂವರೆ ವರ್ಷಗಳ ಕಾಲ ಹಮ್ಮಿಕೊಂಡು ಕೆಲಸ ಮಾಡಿದ ತೃಪ್ತಿ ನನಗಿದೆ. ನನ್ನ ಅವಧಿಯಲ್ಲಿ ಎಲ್ಲ ರೀತಿಯಿಂದ ಸಹಕರಿಸಿದ ನಮ್ಮ ಎಲ್ಲ ಕನ್ನಡ ಮನಸ್ಸುಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಎನ್.ಯಶವಂತ್‍ರಾಜ್, ರಾ.ಬ.ಕೊ. ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಶಿಕ್ಷಕ ದಿವಾಕರ ನಾರಾಯಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ