ಅಖಿಲ ಭಾರತ ಪ್ರತಿಭಟನಾ ದಿನ: ಸಾಂಕೇತಿಕ ಪ್ರತಿಭಟನೆ
ಬಳ್ಳಾರಿ 13: ಅಖಿಲ ಭಾರತ ಪ್ರತಿಭಟನಾ ದಿನದ ಕರೆಯ ಮೇರೆಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಮ್ಎಸ್ಎಸ್) ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಜನಗಳ ಹಲವಾರು ಸಮಸ್ಯೆಗಳ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಧ್ಯಕ್ಷ ಎ. ಶಾಂತಾ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ ಇಡೀ ದೇಶದ ಜನತೆ ಮಹಿಳೆಯರನ್ನು ಒಳಗೊಂಡಂತೆ ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಬಿಕ್ಕಟ್ಟು ಮತ್ತು ಕೊರೊನಾ ಮಹಾಮಾರಿ ಜನಗಳನ್ನು ಒಂದು ಹೊತ್ತು ಊಟಕ್ಕೂ ಪರದಾಡುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಕೇಂದ್ರ ಸರ್ಕಾರ ಜನಗಳಿಗೆ ಮತ್ತೊಂದು ದೊಡ್ಡ ಪೆಟ್ಟು ಕೊಟ್ಟಿದೆ. ಬೆಲೆ ಏರಿಕೆಯ ಮೊದಲ ಪೆಟ್ಟು ಬೀಳುವುದು ಮಹಿಳೆಗೆ.
ಕೊರೋನಾದ ಎರಡೂ ಅಲೆಗಳಿಗು ಯಾವುದೇ ಸಿದ್ಧತೆ ಮಾಡಿಕೊಳ್ಳದ ಸರ್ಕಾರ ಅಕ್ಷರಶಃ ಜನಗಳ ಮಾರಣಹೋಮ ಮಾಡಿತು. ಕನಿಷ್ಠ ಓಷಧಿ, ಆಕ್ಸಿಜನ್, ಬೆಡ್ ಸಿಗದೆ ಒದ್ದಾಡಿದ ಜನಗಳ ನೋವು ಇನ್ನೂ ಕಣ್ಣಮುಂದೆ ಹಚ್ಚಹಸಿರಾಗಿದೆ.ಮತ್ತೆ ಮೂರನೇ ಅಲೆಯು ದೇಶವನ್ನು ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಸರ್ಕಾರ ಈ ಕೂಡಲೇ ಸಮರೋಪಾದಿಯಲ್ಲಿ ಮೂರನೇ ಅಲೆ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು."
ಉತ್ತರಪ್ರದೇಶದ ಅಜಂಗರ್ ಹಾಗೂ ಲಕ್ಷ್ಮೀಪುರದಲ್ಲಿ ಪೊಲೀಸರು ಹಾಗೂ ಗೂಂಡಾಗಳು ಕೈ ಮಿಲಾಯಿಸಿ ದಲಿತ ಮಹಿಳೆಯರ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ. ಉತ್ತರಪ್ರದೇಶ, ಹೆಣ್ಣುಮಕ್ಕಳಿಗೆ ಅತ್ಯಂತ ಅಸುರಕ್ಷಿತ ರಾಜ್ಯವೆಂಬುದು ಇಂತಹ ಘಟನೆಗಳಿಂದ ಮತ್ತಷ್ಟು ಸಾಬೀತಾಗುತ್ತಿದೆ. ಈ ಕೂಡಲೇ ಯೋಗಿ ಆದಿತ್ಯನಾಥ ಸರ್ಕಾರ ದಲಿತ ಮಹಿಳೆಯರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಪೊಲೀಸ್ ಹಾಗೂ ಗೂಂಡಾಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಮತ್ತು ಆ ಮಹಿಳೆಯರಿಗೆ ನ್ಯಾಯ ಒದಗಿಸಬೇಕು" ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯ ರೇಖಾ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಈಶ್ವರಿ, ವಿದ್ಯಾ, ಅಹಲ್ಯ,ಪದ್ಮ, ಗಿರಿಜಾ,ವಿಜಯಲಕ್ಷ್ಮಿ, ಗುಂಡಮ್ಮ, ನಾಗಮ್ಮ, ಮಲ್ಲಮ್ಮ, ಕಲ್ಯಾಣಮ್ಮ, ಹಾಗೂ ಇತರ ಮಹಿಳೆಯರು ಭಾಗವಹಿಸಿದ್ದರು.