ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಅಖಿಲ ಭಾರತ ಮಟ್ಟದ ಪ್ರತಿಭಟನಾ ಧರಣಿ
ಲೋಕದರ್ಶನ ವರದಿ
ಬಳ್ಳಾರಿ 05: ಎಐಡಿಎಸ್ಓ ಅಖಿಲ ಭಾರತ ಸಮಿತಿಯಿಂದ ಏಪ್ರಿಲ್ 5ರಂದು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಅಖಿಲ ಭಾರತ ಮಟ್ಟದ ಪ್ರತಿಭಟನಾ ಧರಣಿ ನಡೆಸಲಾಯಿತು. ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿ ಮುಗಿಲು ಮುಟ್ಟುವ ಘೋಷಗಳೊಂದಿಗೆ ಶಿಕ್ಷಣ ನೀತಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್, ಶಿಕ್ಷಣವನ್ನು ಮತ್ತು ಅದರ ಮೂಲಕ ನಾಗರೀಕತೆಯನ್ನು ನಾಶಮಾಡಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಹುನ್ನಾರವನ್ನು ತೀವ್ರವಾಗಿ ಖಂಡಸಿದರು.
ಈ ನೀತಿಯನ್ನು ಜಾರಿಗೊಳಿಸುವಲ್ಲಿ ಕರ್ನಾಟಕವೇ ಮೊದಲ ರಾಜ್ಯವಾಗಿದ್ದು, ಈಗಾಗಲೇ ನಾಲ್ಕು ವರ್ಷದ ಪದವಿ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ. ತತ್ಪರಿಣಾಮವಾಗಿ ಪಠ್ಯಕ್ರಮವಿರದೆ, ಪಠ್ಯಪುಸ್ತಕಗಳು ದೊರಕದೆ ರಾಜ್ಯದ ವಿದ್ಯಾರ್ಥಿಗಳು ಪಡುತ್ತಿರುವ ಕಷ್ಟಗಳನ್ನು ವ್ಯಕ್ತಪಡಿಸಿದರು. ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಉತ್ತೇಜನ ನೀಡುವ ಈ ನೀತಿಯು ಕೋಚಿಂಗ್ ಲಾಬಿಗಳಿಗೆ ರಹದಾರಿಯಾಗಿದೆ. ಪದವಿ ಶಿಕ್ಷಣಕ್ಕೆ ಕೂಡ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುತ್ತಿದೆ. ಒಟ್ಟಾರೆಯಾಗಿ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಈ ನೀತಿಯು ದೇಶದ ದೊಡ್ಡ ಸಂಖ್ಯೆಯ ಗ್ರಾಮೀಣ ಬಡ ಹಾಗೂ ಬುಡಕಟ್ಟು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಈ ನೀತಿಯು ಸೃಷ್ಟಿಸುವ ಶಿಕ್ಷಣದಲ್ಲಿನ ಬಿಕ್ಕಟ್ಟಿನಿಂದ ಆಚೆ ಬರಲು ಇರುವ ಮಾರ್ಗವೆಂದರೆ ಹೋರಾಟವೊಂದೇ. ದೇಶದ ರೈತರು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳು ವಿರುದ್ಧ ನಡೆಸಿದ ಐತಿಹಾಸಿಕ ಹೋರಾಟದಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ದೇಶವ್ಯಾಪಿ ಬಲಿಷ್ಠ ಹೋರಾಟಗಳನ್ನು ಬೆಳೆಸಬೇಕು. ಮತ್ತು ತನ್ಮೂಲಕ ಮೂಲಕ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ೋರೇಟಿಕರಣದ ನೀಲಿನಕ್ಷೆಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ಯನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.