ಲೇಖನಗಳು

ಎಚ್ಚರಿಕೆಯ ಗಂಟೆ....

ಎಚ್ಚರಿಕೆಯ ಗಂಟೆ....

ಒಂದು ಊರಿನಲ್ಲಿ ಹನುಮವ್ವೆ ಎಂಬವಳಿದ್ದಳು.ಅವಳಿಗೆ ರಾಕೇಶ, ದೀಪ್ತಿ ಎಂಬ ಇಬ್ಬರು ಮಕ್ಕಳಿದ್ದರು. ಹನುಮವ್ವೆಗೆ ಬಡತನ. ಗಂಡ ಸತ್ತು ಒಂದು ವರ್ಷ ಕಳೆಯುತ್ತಾ ಬಂದಿತ್ತು. ಬದುಕು ಅವಳಿಗೆ ಸವಾಲಾಗತೊಡಗಿತ್ತು. ಗುಟುಕು ಗಂಜಿಗೆ; ತುಂಡು ಭೂಮಿಗೂ ಗತಿ ಇಲ್ಲದ ಹನುಮವ್ವೆ ಗಂಜಿಗಾಗಿ ದಶದಿಕ್ಕುಗಳತ್ತ ನೋಡುತ್ತಿದ್ದಳು. ಆ ಊರಿನಲ್ಲಿ ಹೊಲದ ಉದ್ಯೋಗ ಬಿಟ್ಟರೆ ಬೇರೆ ಯಾವ ಉದ್ಯೋಗಗಳೂ ಇರಲಿಲ್ಲ. 

ಹನುಮವ್ವೆಗೆ ಹೊಟ್ಟೆ ಹೊರೆವುದು ಕಷ್ಟವಾಗತೊಡಗಿತ್ತು. ಆ ಕಷ್ಟದಲ್ಲಿಯು ಮಕ್ಕಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದವು.ಅ ವಳು ಮಕ್ಕಳ ಭವಿಷ್ಯಕ್ಕಾಗಿ ಇನ್ನೂ ಕಷ್ಟಪಡಲು ಎದುರು ನೋಡುತ್ತಿದ್ದಳು. ಅವಳಿಗೆ ನೆರವು ನೀಡಿದ್ದೇ ಹೊಲದ ಕೆಲಸಗಳು. ಕಳೆ ಕೀಳುವುದು, ತೆನೆ ಮುರಿವುದು, ಅಲಸಂದಿ, ಹೆಸರು ಬುಡ್ಡಿ ಬಿಡಿಸುವುದು ಹೀಗೆ  ಹನುಮವ್ವೆ ದಿನಕ್ಕೆ ಎರಡು ಕೂಲಿಯಲ್ಲಿ ತನ್ನನ್ನು  ತಾನು ತೊಡಗಿಕೊಂಡಳು. 

ಹನುಮವ್ವೆ ಬಲು ಜಾಣೆ. ಕೂಲಿಯಲ್ಲಿ ಕೈ ಬಲಿಸಿಕೊಂಡಂತೆ; ನೆರೆ ಹೊರೆಯವರ ಜೊತೆ ಸ್ನೇಹ ಹಾಗೂ ವಿಶ್ವಾಸದಿಂದ ನಡೆಯತೊಡಗಿದ್ದಳು. ಹೀಗಾಗಿ ಓಣಿಯ ಜನರು ಅವಳನ್ನು ಬಹುವಾಗಿ ಹಚ್ಚಿಕೊಂಡಿದ್ದರು. ಓಣಿಯ ಗೌಡತಿಯಂತೂ ಅವಳನ್ನು ಬಿಟ್ಟು ಸ್ವಲ್ಪು ‘ಖಾರ’ವನ್ನೂ ತಿನ್ನುತ್ತಿರಲಿಲ್ಲ. ಬೆಳಗಾದಾರೆ ಹನುಮಿ......  ಹನುಮಿ.... ಎಂದು ಬಾಗಿಲತ್ತ ನೋಡುತ್ತಿದ್ದಳು. ಅವಳು ಮನೆಗೆ ಬಂದರೆ ತಗೋ... ಉನ್ನು ಎಂದು ಉಪಚಾರ ಮಾಡುತ್ತಿದ್ದಳು. ಅದಕ್ಕೆ  ಹನುಮೆಯೇನೂ ಕಡಿಮೆ ಇರಲಿಲ್ಲ. ಅವಳೂ ಗೌಡತಿಯ ಮನೆಯ್ಲ ಕಸ, ಮುಸುರೆ, ಗಿರಣಿಯಂತಹ ಎಡ ಬಲ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. 

ಗೌಡತಿ ಒಂದು ದಿನ ಹನುಮೆಯನ್ನು ಕರೆದು: “ಹನುಮೆ,.... ಎಷ್ಟ ದುಡಿತಿ ಒಂದ ದಿನನಾರ ಮನಿಯ್ಯಾಗ ಇರ. ಮಕ್ಕಳ್ನ ಕರಕೊಂಡು ಒಂದ ದಿನನಾರ ಊಟ ಮಾಡು.” ಎಂದು ತಿಳಿವಳಿಕೆ ಹೇಳಿದಳು. 

ಹನುಮೆ ಕಣ್ಣಲ್ಲಿ ನೀರು ತಂದಳು. ಗೌಡತಿ ಅವಳ ಬಡತನವನ್ನು ನೋಡಲಾರದೇ ಅವಳಿಗೆ  ಒಂದಿಷ್ಟು ಗೋದಿಯನ್ನು ಗಂಟು ಕಟ್ಟಿ ಕೊಟ್ಟಳು.  ಹನುಮೆ ಆ ಗಂಟನ್ನು ಮುಟ್ಟದೇ ಸುಮ್ಮನೆ ನಿಂತಳು. ಗೌಡತಿ ಅವಳ ಸ್ವಾಭಿಮಾನವನ್ನು ತಿಳಿದು ಅವಳ ತಲೆಯ ಮೇಲೆ ಗೋದಿಯ ಗಂಟನ್ನು ಇಟ್ಟು ಅವಳ ಕಣ್ಣೀರು ಒರೆಸಿ “ಹುಚ್ಚೀ... ಇದ ಕಾಲ..... ಇದ ದಿನ.... ಮನುಷ್ಯಾಗ ಇರುದಿಲ್ಲ.” ಎಂದು ಬೆನ್ನು ನೇವರಿಸಿ ಮನೆಗೆ ಕಳುಹಿಸಿಕೊಟ್ಟಳು. 

ಗೋದಿ ಗಂಟನ್ನು ಹೊತ್ತುಕೊಂಡು ಮನೆಗೆ ಬಂದ ಹನುಮೆಗೆ ಸ್ವರ್ಗ ಮೂರೇ ಗೇನು ಉಳಿದಿತ್ತು. 

“ರಾಕ್ಯಾ.... ದೀಪ್ತಿ ಬರೆ​‍್ರಯಲೋ...... ನಾ ಏನ ತಂದೆನಿ ನೋಡ್ರಿ.... ಏನದು ಹೇಳ್ರೀ......?” ಎಂದು ಸಂತೋಷದಿಂದ ಮಕ್ಕಳನ್ನು ಕೂಗಿದಳು. ಮಕ್ಕಳು ಓಡಿ ಬಂದು ತಾಯಿಯನ್ನು ತಬ್ಬಿಕೊಂಡವು. ಅದೊಂದು ಅವಣೀರ್ಯ ಆನಂದದ ‘ತಾಯಿ ಮಕ್ಕಳ’ ಅಪ್ಪುಗೆಯಾಗಿತ್ತು. 

ಮಕ್ಕಳು ಗೋದಿಯನ್ನು ನೋಡಿ ಸಂತೋಷ ಪಟ್ಟವು.  

ಹನುಮವ್ವೆ ಮಕ್ಕಳನ್ನು ಮುಂದೆ ಕೂಡ್ರಸಿಕೊಂಡು ಹೇಳತೊಡಗಿದಳು. 

“ಮಕ್ಕಳೇ...... ರೋಗಿ ಬಯಸಿದ್ದು ಹಾಲು ಹಣ್ಣು ; ವೈದ್ಯ ಹೇಳಿದ್ದೂ  ಹಾಲೂ ಹಣ್ಣ ಆದಂಗಾತು. ಪಕ್ಕದ ಮನೆಯ ಗೌಡತಿ ಈ  ಗೋದಿ ಕೊಟ್ಟಾಳ. ಇವ್ನ ಒಷ್ಟೂ ಒಮ್ಮೆಗೆ ತಿನ್ನೂದು ಬ್ಯಾಡ....ಮಕ್ಕಳೇ...!! ನಮಗ ಕೂಲಿ ಇಲ್ಲದಾಗ, ಕೈಯಾಗ ರೊಕ್ಕ ಇಲ್ಲದಾಗ ಈ ಗೋದಿನ ಒಡಿಸೋಣ.. ಉಪ್ಪಿಟ್ಟು, ಹುಗ್ಗಿ ಮಾಡೂಣ.. ಹೌದಾ...??” ಎಂದು ಮಕ್ಕಳ ಒಪ್ಪಿಗೆಯನ್ನು ಕೇಳಿದಳು. ಮಕ್ಕಳು ಗೋಣು ಹಾಕಿದರು. 

ಹನುಮವ್ವೆ ಬಲು ಎಚ್ಚರಿಕೆಯವಳು. ಅವಳು ಮತ್ತೆ ಹೇಳಿದಳು  ಈ ಗೋದಿ ನಮಗ ಬಾಳಿಕಿ ಬರಬೇಕಾದ್ರ “ಗೋದಿ ರಕ್ಷಣೆ” ಮಾಡಬೇಕು  ಇವ್ನ ‘ಕಾಲ ಕಾಲಕ್ಕ’ ನೋಡಿಕೋತ ಇರಬೇಕು. ಗಂಟು ಬಿಚ್ಚಿ ನುಸಿ,  ಬಾಲೂಳಾ... ಏನಾರ ಆಗ್ಯಾವ ಎಂದು ನೋಡತಿರಬೇಕು.” ಈ ಕೆಲಸಾನ ಯಾರ ಮಾಡತೀರಿ’ ಎಂದು ಮಕ್ಕಳನ್ನು ಕೇಳಿದಳು. 

ದೀಪ್ತಿ ಅನ್ನನ ಮುಖ ನೋಡಿದಳು.  ಹನುಮೆಗೆ ತಿಳಿಯಿತು ‘ಈ ಕೆಲಸಕ್ಕೆ ರಾಕ್ಯಾನ ಯೋಗ್ಯ’ ಎಂದು. 

‘ರಾಕ್ಯಾ... ನೀನು ಈ ಕೆಲಸ ತಗೋ’ ಮತ್ತು ವ್ಯಾಳ್ಯಾಕ ಸರಾ​‍್ಯಗಿ ನೋಡಕೋತಿರು​‍್ರ’ ಎಂದು ಎಚ್ಚರಿಕೆ ವಿಧಿಸಿದಳು. 

ರಾಕೇಶ ಒಪ್ಪಿಕೊಂಡನು. 

“ದೀಪ್ತಿ...., ನೀನು ಮನೆಯಲ್ಲಿ ಅನ್ನ, ಸಾರು, ಕಸ, ಮುಸುರೆ ಹಾಗೂ ಚಿಕ್ಕ ಚಿಕ್ಕ  ಕೆಲಸಗಳು  ನಿನ್ನ ಪಾಲಿಗೆ” ಎಂದು ಹನುಮವ್ವೆ ಕೆಲಸದ ಹಂಚಿಕೆ ಮಾಡಿದಳು. ದೀಪ್ತಿ  ಗೆಲುವಿನ ಕೈ ತೋರಿದಳು. 

ದಿನಗಳು ಉರುಳುತ್ತಿದ್ದವು....... 

ಹನುಮವ್ವೆ ಹೊಲದ ಕೆಲಸಗಳಲ್ಲಿ ಮಗ್ನಳಾಗಿದ್ದಳು.ಮಕ್ಕಳ ಬವಿಷ್ಯಕ್ಕಾಗಿ ಹಗಲಿರುಳೂ  ದುಡಿಯುತ್ತಿದ್ದಳು. ರಾಕೇಶ ಶಾಲೆಯಲ್ಲಿ ಹೀರೆಮಣಿಯಾಗಿದ್ದನು. ಮಕ್ಕಳ ಮನೆಗೆಲಸ ನೋಡವುದು, ಬರಹ ತಿದ್ದುವುದು ಮುಂತಾದ ಕೆಲಸಗಳನ್ನು ಶಾಲೆಯಲ್ಲಿ ಮಾಡುತ್ತಿದ್ದನು. ಅಲ್ಲದೇ ಟೀಚರು ಪ್ರಾಜೆಕ್ಟ ಕೆಲಸವನ್ನು ಬೇರೆ ರಾಕೇಶನಿಗೆ ವಹಿಸಿಕೊಟ್ಟಿದ್ದರು. “ದೇಶದ ಸ್ವಾತಂತ್ರ್ಯ  ಹೋರಾಟದಲ್ಲಿ ಮಹಿಳೆಯರ ಪಾತ್ರ” ಪ್ರಾಜೆಕ್ಟ ವಿಷಯದ  ವಸ್ತುವಾಗಿತ್ತು. ರಾಕೇಶ ಆ ಕೆಲಸದಲ್ಲಿ ತಲ್ಲೀನನಾಗಿದ್ದನು. 

ಅದೊಂದು ಬೆಳಗು ಹನುಮವ್ವೆ ಕೆಲಸಕ್ಕೆ ಹೋಗಿ ಆಗಲೇ ಎರಡು ತಾಸುಗಳಾಗಿತ್ತು. ದೀಪ್ತಿ ಅನ್ನ ಮಾಡಲು ಅಕ್ಕಿ ಹುಡುಕತೊಡಗಿದ್ದಳು. ಅವಳ ಕೈಗೆ ಸಿಕ್ಕಿದ್ದು ಗೋದಿಯ ಗಂಟು. ಅವಳು ಅದುವೇ ಅಕ್ಕಿಯ ಗಂಟು ಎಂದು ತಿಳಿದು ಅದನ್ನು ಬಿಚ್ಚಿದಳು. ಆದರೆ ಅವು ಗೋದಿಯಾಗಿದ್ದವು. ಅದರಲ್ಲಿ ನುಸಿ ‘ಬುಚುಬುಚು’ ಎಂದು ಹರಿದಾಡುತ್ತಿದ್ದವು.   ಬಾಲೂಳಾಗಳೂ ಏರಿ ಗಂಟಿನ ಸಂದುಗಳಲ್ಲಿ ಹಾಯ್ದು ಹೊರ ಬರುತ್ತಿದ್ದವು. ದೀಪ್ತಿ ಗಾಬರಿಯಾಗಿ ಅನ್ನನತ್ತ ಓಡಿ ಅನ್ನನಿಗೆ ಗಂಟು ತೋರಿಸಿದಳು. ರಾಕೇಶನಿಗೆ ಭಯವೂ ಆಶ್ಚರ್ಯವೂ ಆಯಿತು. ನುಸಿ ಅರಿವೆ, ನೆಲ, ಡಬ್ಬಿ, ಬುಟ್ಟಿಯ ಮೇಲೆಲ್ಲ ಹರಿದಾಡತೊಡಗಿದವು. 

ಮಕ್ಕಳು ಚಿಕ್ಕವರಿದ್ದರೂ ಜಾಣರಿದ್ದರು.ಓಣಿಯ ಅವ್ವಕ್ಕಂದಿರ ಕೆಲಸಗಳನ್ನು ಲಕ್ಷ್ಯಗೊಟ್ಟು ವೀಕ್ಷಿಸುತ್ತಿದ್ದರು. ಓಣಿಯ ಪರವ್ವ ಮುದುಕಿ ಒಂದು ದಿನ ಜೋಳವನ್ನು ತೊಳೆದು ನುಸಿ ಬೇರಿ​‍್ಡಸುವುದನ್ನು ರಾಕೇಶ ನೋಡಿದ್ದನು. ಅದನ್ನು ನೆನಪಿಗೆ ತಂದುಕೊಂಡ ಮಕ್ಕಳು ಗೋದಿಯನ್ನು ನೀರಿನಲ್ಲಿ  ಹಾಕಿ ನುಸಿ ಬೇರಿ​‍್ಡಸತೊಡಗಿದರು. ಗೋದಿ ಕಾಳಿನಲ್ಲಿ ನುಸಿ ಒಳಹೊಕ್ಕು ಅಡಗಿಕೊಂಡಿದ್ದವು. ಅವುಗಳನ್ನೆಲ್ಲಾ ಸ್ವಚ್ಚಗೊಳಿಸಬೇಕಾದರೆ ಮಕ್ಕಳಿಗೆ ರಗಡು ರಗಡಾಗಿ ಹೋಯಿತು. ಅಲ್ಲದೇ  ಮಧ್ಯಾಹ್ನದವರೆಗೂ ಅವರಿಗೆ  ಕೆಲಸ ಕೈಹಿಡಿಯಿತು. ಮಕ್ಕಳು ಅಂದಿನ ದಿನದ ಶಾಲೆಗೆ ಹಾಜರಾಗಲು ಸಾಧ್ಯವೇ ಆಗಲಿಲ್ಲ. ಹೊತ್ತು ಹೊರಳಿದ ನಂತರ ಹನುಮವ್ವೆ  ಹೊಲದ ಕೆಲಸದಿಂದ ಮನೆಗೆ ಮರಳಿದಳು. ಮಕ್ಕಳು ಮನೆಯಲ್ಲಿ ಇದ್ದನ್ನು ನೋಡಿ  ಚಕಿತಳಾದಳು. ಶಾಲೆಗೇಕೆ ಹೋಗಿಲ್ಲವೆಂದು ಕೇಳಿದಳು. ಮಕ್ಕಳು ನಡೆದಸಂಗತಿ ತಿಳಿಸಿದರು.ಹನುಮವ್ವೆ ಕೋಪ ತಾಳಲಿಲ್ಲ. ಬದಲಿಗೆ ಇದೇ ಸಕಾಲವೆಂದು  

ಮಕ್ಕಳನ್ನು ಮುಂದೆ ಕೂಡ್ರಿಸಿಕೊಂಡು : “ರಾಕೇಶ, ನೋಡ್ರಿ ಈಗ ಗೋದಿ ಗಂಟು ಎಷ್ಟು ಕಿರಿದು ಆಗೇತಿ? ಮೊದಲಿನ ಗೋದಿ ಗಂಟಿನ ಗಾತ್ರ ಎಷ್ಟು ದೊಡ್ಡದಿತ್ತು. ನೆನಪಿಸಿಕೊಳ್ಳಿರಿ, ಎರಡನೇಯದಾಗಿ ಇವತ್ತು ಬೆಳಗಿನಿಂದಲೂ ಇದೇ ಕೆಲಸವನ್ನು ಮಾಡಿದ್ದೀರಿ. ಇಬ್ಬರ ಶಾಲೆಯೂ ಇವತ್ತು ತಪ್ಪಿ ಹೋಗಿದೆ. ಇವತ್ತಿನ ಪಾಠ ಕಲಿಯದೇ ದಿನ ಹಾಳು ಆಯಿತು.” ಮಕ್ಕಳು ತಾಯಿಯ ಮಾತುಗಳನ್ನು ಆಲಿಸುತ್ತಿದ್ದರು. 

ಮತ್ತೆ ಹನುಮವ್ವೆ :  

“ಈವೆಲ್ಲಾ.... ತಪ್ಪಿನ ಚಹರೆಗಳು. ತಪ್ಪು ತಪ್ಪೇ. ತಪ್ಪು ಹೆಚ್ಚಾದಷ್ಟೂ ತಪ್ಪಿನ ಚಹರೆ ಆಳ ಆಕ್ಕೋತನ ಹೊಕ್ಕೈತಿ. ಈದೆಲ್ಲದಕೂನು ಪರಿಹಾರ ಏನ ಹೇಳಿರಿ” ಎಂದು ಹನುಮವ್ವೆ  ಮಕ್ಕಳಿಗೆ ಪ್ರಶ್ನೆ ಹಾಕಿದಳು. 

ಮಕ್ಕಳು ಯೋಚನೆಗೆ ಇಳಿದರು.ಯೋಚಿಸತೊಡಗಿದರು..... 

ಕೆಲ ಕ್ಷಣಗಳು ಕಳೆದವು.... 

ಮುವ್ವರ ಮಧ್ಯ ಮೌನ ಬೆಳೆದಿತ್ತು...... 

ಮಕ್ಕಳಿಗೆ ಪರಿಹಾರ ಕಾಣದೇ; ಅವರು ತಮ್ಮ ಯೋಚನೆಯ ದಿಕ್ಕಿನತ್ತ ಮಾತನಾಡಿದರು. 

“ಎವ್ವ ಹುಗ್ಗಿನರ ಮಾಡಲಿಲ್ಲ.” ಎಂದು ತಕರಾರು ಎತ್ತಿದಳು ದೀಪ್ತಿ. 

“ಎವ್ವ, ಉಪ್ಪಿಟ್ಟು ಮಾಡಿಕೊಂಡು ತಿಂದಿದ್ದರೆ ಚೊಲೊ ಇತ್ತು..” ರಾಕೇಶ ಹಲುಬಿದ. 

ಖರೆ, ಖರೇ.... 

“ಎಲ್ಲ ಕೆಲಸ ಹಂಗ ಅಕ್ಕಾವಾ...? ರಾಕಿ ನೀನು ನಿನ್ನ ಕೆಲಸ ಮಾಡಿದ್ದರ.........!!!!” ತಾಯಿಯ ಪ್ರಶ್ನೆ. 

ರಾಕೇಶ ಯೋಚಿಸುತ್ತಿದ್ದಂತೆ ಕಂಡು ಬಂದಿತು. 

“ಎವ್ವ ಸಾಲ್ಯಾಗ ಕೆಲಸ ಬಾಳ ಇದ್ವು ...... ನನಗ ಗೋದಿ ನೆನಪ ಆಗಲಿಲ್ಲ. ” ಎಂದನು. 

“ನೋಡಪ್ಪ....ಸಾಲಿ ಸಾಲಿ ಅಂದರ ಸಾಲೀನ ಬದುಕೇನ....? ಅದು ಬದುಕಿಗೆ  ಬೇಕಾದ  ಮಲಾಮ. ಸಾಲ್ಯಾಗ ಇದ್ದಾಗ ಸಾಲೀದು.  ಮನಿಯ್ಯಾಗ ಇದ್ದಾಗ ಮನೀದು ನೋಡತ್ತೀರಬೇಕಪ್ಪ. “ಎಚ್ಚರಿಕೆ ಗಂಟೆ ಯ್ಯಾವತ್ತು  ಮಗ್ಗಲ ತಲಿಯ್ಯಾಗ’ ಇಟ್ಟುಕೊಂಡಿರಬೇಕು  ಮತ್ತ ಕಾಲಕ್ಕ ತಕ್ಕಂಗ  ಆ ಗಂಟಿ ಬಾರಿಸಬೇಕ” ಎಂದಳು. 

“ಎವ್ವ... ನೂರಾ ಎಂಭತ್ತು ರೂಪಾಯಿ ನಮ್ಮದು ಹಾಳಾತು.” ಎಂದಳು ದೀಪ್ತಿ. ತಂಗಿಯ ಮಾತು ರಾಕೇಶನ ಮನದಲ್ಲಿ ಇಳಿಯಿತು. 

ಮಕ್ಕಳು ಮಾತಿಲ್ಲದೇ ಮೌನದಲ್ಲಿ ಲೀನವಾಗಿದ್ದರು. 

ಅವರ ‘ಮೌನವನ್ನು’ ಅರಿತ ಹನುಮವ್ವೆ ಸಮಾಧಾನದ ಉಸಿರನ್ನು ಹೊರ ಚೆಲ್ಲಿದಳು.   

- ಯಮುನಾ ಕಂಬಾರ 

ರಾಮದುರ್ಗ 


ಸುದ್ದಿ ಓದಿ