ಶಿಕ್ಷಣದಲ್ಲಿ ಬದಲಾವಣೆಗೆ ಅಗಸ್ತ್ಯ ಫೌಂಡೇಶನ್ ಸದಾ ಪ್ರಯತ್ನಿಸುತ್ತದೆ : ಮಲ್ಲಿಕಾರ್ಜುನ ಬಳಿಗೇರ
ಹಾವೇರಿ 03: ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲವನ್ನು ಹುಟ್ಟು ಹಾಕಿ, ಅವರಲ್ಲಿ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸುವದು ಹಾಗೂ ಅವರಲ್ಲಿ ಸಾಂಸ್ಥಿಕ ಪರಾಕ್ರಮವನ್ನು ಹೆಚ್ಚಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವುದರ ಮೂಲಕ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗೆ ಅಗಸ್ತ್ಯ ಫೌಂಡೇಶನ್ ಸದಾ ಪ್ರಯತ್ನಿಸುತ್ತದೆ ಎಂದು ಅಗಸ್ತ್ಯ ಪ್ರತಿಷ್ಠಾನದ ಸಂಯೋಜಕ ಮಲ್ಲಿಕಾರ್ಜುನ ಬಳಿಗೇರ ಹೇಳಿದರು.
ನಗರದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಅಗಸ್ತ್ಯ ಪ್ರತಿಷ್ಠಾನದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಯೋಜಕ ವೀರನಗೌಡ ಫಕೀರಗೌಡ ಮಾತನಾಡಿ, ವಿಜ್ಞಾನಿ ರಾಮ್ಜಿ ರಾಘವನ್ ಅವರ ದೂರದೃಷ್ಠಿಯಿಂದ ಈ ಸಂಸ್ಥೆ ಸ್ಥಾಪಿಸಲಾಗಿದ್ದು, ದೇಶಾದ್ಯಂತ ಗ್ರಾಮೀಣ ಹಾಗೂ ಅರೆ ನಗರದ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಪರಿಕಲ್ಪನೆಗಳ ಆಧಾರದ ಮೇಲೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಸಂಸ್ಥೆ 700 ಕ್ಕೂ ಹೆಚ್ಚು ವಿಜ್ಞಾನ ಕೇಂದ್ರ ಹೊಂದಿದ್ದು ಇಲ್ಲಿಯವರೆಗೆ 12 ಮಿಲಿಯನ್ ಮಕ್ಕಳನ್ನು ತಲುಪಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭೂಮಿಕಾ ಅಕ್ಕಿ, ದೀಪಾ ಗೊಡ್ಡೆಮ್ಮಿ, ಸುಶ್ಮಿತಾ ಧಾರವಾಡ ಹಾಗೂ ಮದಿಯಾ ನದಾಫ ಇವರಿಗೆ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯಿನಿ ಚನ್ನಮ್ಮ ಅಂತರವಳ್ಳಿ ವಹಿಸಿದ್ದರು. ಸಮಾರಂಭದಲ್ಲಿ ಶೋಭಾ ನಾಶೀಪುರ, ರೂಪಾ ಟಿ.ಆರ್. ಎಂ. ರುದ್ರೇಶ, ಲೀಲಾವತಿ ಅಂದಾನಿಮಠ, ವಿ.ಬಿ. ಬನ್ನಿಹಳ್ಳಿ, ಎಂ.ಎಸ್. ಹಿರೇಮಠ, ರವಿ ಕರಲಿಂಗಣ್ಣನವರ, ಎಚ್.ಕೆ.ಆಡಿನ, ಆನಂದ ಎಂ. ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಹನಾ ಪ್ರಾರ್ಥಿಸಿದರು. ಎಸ್.ಎನ್. ಮಳೆಪ್ಪನವರ ಸ್ವಾಗತಿಸಿ, ನಿರ್ವಹಿಸಿದರು. ಎಸ್.ಸಿ.ಮರಳಿಹಳ್ಳಿ ವಂದಿಸಿದರು.