ಧಾರ್ಮಿಕ ಚಿಲುಮೆ ಆದಿ ಶಂಕರಾಚಾರ್ಯರು
ಮಾನವನ ಜೀವನದ ಪರಮೋದ್ಧೇಶ ಮೋಕ್ಷ ಸಾಧನೆ ಇದಕ್ಕೆ ಪೂರಕವಾಗಿ ಆತ್ಮಜ್ಞಾನ ಪಡೆಯುವುದು. ಅತ್ಯವಶ್ಯಕ, ಆತ್ಮಜ್ಞಾನದ ಮೂಲಕ “ಅಹಂ ಬ್ರಹ್ಮಾಸ್ಮಿ” ಎಂಬ ತತ್ವವನ್ನು ಅರಿತು ಪ್ರತಿಯೊಬ್ಬ ವ್ಯಕ್ತಿಯು ಆತ್ಮೋನ್ನತಿಯನ್ನು ಹೊಂದುವ ಮಾರ್ಗವನ್ನು ತೋರಿದವರು, ಧಾರ್ಮಿಕ ಚಿಲುಮೆ, ಆಧ್ಯಾತ್ಮದ ಮಾರ್ಗದರ್ಶಿ ದೀಪ ಜಗದ್ಗುರು ಆದಿ ಶಂಕರಚಾರ್ಯರು. ಜ್ಞಾನದ ಪರಮಸೀಮೆಯಾದ ಶಂಕರರ ಜೀವನ ಅತ್ಯಂತ ಪಾವನದಾಯಕವಾದ ಕಥನವಾಗಿದೆ.
ಪುಣ್ಯತಮವಾದ ಭರತ ಭೂಮಿಯ ದಕ್ಷಿಣ ಭಾಗದಲ್ಲಿ ಪಡುವಣ ಕಡಲಿಗೆ ಹೊಂದಿಕೊಂಡು ಕೇರಳ ಎಂಬ ಹೆಸರಿನ ಒಂದು ಪ್ರಾಂತವಿದೆ. ಕೇರಳವು ಮೇಧಾವಿಗಳಿಗೆ ಬಹಳ ಪ್ರಸಿದ್ಧವಾದ ಪ್ರಾಂತವಾಗಿತ್ತು. ಇಲ್ಲಿ ಅನೇಕ ಪಾವನಕರವಾದ ನದಿಗಳಿವೆ. ಅವುಗಳಲ್ಲಿ ಪೂರ್ಣಾ ಎಂಬ ಪಾವನತಮವಾದ ನದೀತೀರದಲ್ಲಿ ‘ಕಾಲಟಿ’ ಎಂಬ ಅಗ್ರಹಾರದಲ್ಲಿ ಈಶ್ವರಾನುಗ್ರಹದಿಂದ ಜ್ಞಾನನಿಧಿಯಾದ ಶಂಕರರು ಕ್ರಿ. ಶ. 788ರಲ್ಲಿ ಜನಿಸಿದರು. ಶಿವಗುರು ಹಾಗೂ ಆರ್ಯಾಂಬ ದಂಪತಿಗಳ ಸುಪುತ್ರರಾಗಿ ಭೂಮಿಗೆ ಅವತರಿಸಿ ಬಂದ ಶ್ರೀ ಶಂಕರರು ಲೋಕ ಕಲ್ಯಾಣದ ಯುಗವು ಪ್ರಾರಂಭವಾಯಿತೆಂದು ಸೂಚಿಸುವಂತ ತನ್ನ ಬಾಲಲೀಲೆಗಳನ್ನು ಪ್ರಾರಂಭಿಸಿದರು. ಹೀಗೆ ಅವರು ಒಂದನೆಯ ವರುಷದಲ್ಲಿ ಮಾತೃಭಾಷೆಯನ್ನು, ಎರಡನೆಯ ವರ್ಷದಲ್ಲಿ ಸಕಲ ಪುರಾಣ ಇತಿಹಾಸಗಳನ್ನು, ಮೂರನೆಯ ವಯಸ್ಸಿನಲ್ಲಿ ಸಾಹಿತ್ಯ, ವ್ಯಾಕರಣ ಮೊದಲಾದವುಗಳನ್ನು ಕಲಿತುಕೊಂಡು ಎಲ್ಲರಿಗೂ ಕೌತುಕವನ್ನುಂಟು ಮಾಡಿದರು.
ಶಂಕರರ ವಾಣಿಯು ಸರಳ ವಾಣಿಯಾಗಿತ್ತು. ಮಾತನಾಡುವುದೆಲ್ಲಾ ಕೋಗಿಲೆಯ ಇಂಚರದಂತೆ ಇಂಪಾಗಿರುತ್ತಿತ್ತು. ಅವರು ಅನೇಕ ಸ್ತೋತ್ರಗಳನ್ನು ರಚಿಸಿದ್ದರು. ಇಷ್ಟು ಅಲ್ಪ ವಯಸ್ಸಿನಲ್ಲಿಯೇ ಅಸಾಮಾನ್ಯ ಪಂಡಿತನೆನಿಸಿದ ಬಾಲ ಶಂಕರನನ್ನು ಎಲ್ಲರೂ ಬಹಳ ಭಯ, ಭಕ್ತಿಗಳಿಂದ ಕಾಣುತ್ತಲಿದ್ದರು. ಆದುದರಿಂದಾ ಎಲ್ಲರೂ ಬಾಲ ಶಂಕರನನ್ನು “ಶಂಕರರು” ಎಂದು ಗೌರವಪೂರ್ಣವಾಗಿ ಸಂಬೋಧಿಸುತ್ತಿದರು. ವಿಧಿಯುಕ್ತವಾಗಿ ಸನ್ಯಾಸವನ್ನು ತೆಗೆದುಕೊಂಡ ನಂತರ ಶ್ರೀ ಶಂಕರ ಭಗವತ್ಪಾದರು ಶ್ರೀ ಗೋವಿಂದ ಭಗವತ್ಪಾದರ ಶಿಷ್ಯರಾಗಿ ಅವರ ಸೇವೆಗೈಯುತ್ತಾ ಅವರ ಆಶ್ರಮದಲ್ಲಿಯೇ ನಿಂತರು. ಶ್ರೀ ಶಂಕರ ಭಗವತ್ಪಾದರ ಕಾಶೀ ಪಟ್ಟಣದಲ್ಲಿ ನಿತ್ಯ ಪಾದಯಾತ್ರೆಯನ್ನು ಪ್ರಾರಂಭಿಸಿ ಶ್ರೀ ವಿಶ್ವೇಶ್ವರನ ದರ್ಶನವನ್ನು ಪಡೆದುಕೊಳ್ಳುತ್ತಿದ್ದರು. ಆಮೇಲೆ ತಮ್ಮ ಅನುಷ್ಠಾನವನ್ನು ಮುಗಿಸಿಕೊಂಡು ಒಂದೊಂದು ದಿವಸ ಒಂದೊಂದು ಕಡೆಗೆ ಪಾದಯಾತ್ರೆ ಹೊರಡುತ್ತಿದ್ದರು.
ಹೀಗೆ ಕಾಶೀ ಕ್ಷೇತ್ರವು ಶ್ರೀ ಶಂಕರ ಭಗವತ್ಪಾದರು ಆಧ್ಯಾತ್ಮಿಕ ಕಾವ್ಯಕ್ಕೆ ಸ್ಫೂರ್ತಿಯ ಸೆಲೆಯಾಯಿತು. ಅವರು ಅಲ್ಲಿ ಶಿವನನ್ನು, ಅನ್ನಪೂರ್ಣೆಯನ್ನು, ಕಾಲಭೈರವನನ್ನು, ಗಣೇಶನನ್ನು, ಗಂಗೆಯನ್ನು, ಮಣಿಕರ್ಣಿಕೆಯನ್ನು ಕುರಿತು ಅನೇಕ ಮನೋಹರವಾದ ಸ್ತೋತ್ರಗಳನ್ನು ರಚಿಸಿದರು. ಅಲ್ಲಿ ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆಗಳ ಬಗ್ಗೆ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದರು. ವಿಷ್ಣುಶರ್ಮನೆಂಬ ಮನುಷ್ಯನು ಅವರ ಮೊದಲ ಶಿಷ್ಯನಾದನು. ನಂತರ ಶಂಕರರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವ್ಯಾಸ ಮತ್ತು ಗೌಡಪಾದರೆಂಬ ದೊಡ್ಡ ಯೋಗಿಗಳನ್ನು ಭೇಟಿಯಾಗಿ ಅವರ ಆಶೀರ್ವಾದಗಳನ್ನು ಪಡೆದರು. ನಂತರ ಕಾಶಿಗೆ ಹಿಂತಿರುಗಿ ಬಂದು ವೇದಗಳ ಮೇಲೆ ಹೊಸ ಅರ್ಥವನ್ನು ಕೊಡುವ ತಮ್ಮದೆ ಆದ ಭಾಷ್ಯೆಯನ್ನು ಬರೆದರು. ಶಂಕರರು ವೇದಾಂತ ಮತ್ತು ಭಗವದ್ಗೀತೆಗಳ ಮೇಲೆ ಬರೆದ ಭಾಷ್ಯಗಳಾವವೆಂದರೆ ಶಂಕರ ಭಾಷ್ಯ, ಆನಂದಲಹರಿ, ದಕ್ಷಿಣಾಮೂರ್ತಿ ಸ್ತೋತ್ರ, ವಿವೇಕ ಚೂಡಾಮಣಿ, ಪ್ರಬುದ್ಧ ಸುಧಾಕರ, ಸೌಂದರ್ಯಲಹರಿ ಇತ್ಯಾದಿ ಅವರು ಸಂಸ್ಕೃತದಲ್ಲಿ ಅನೇಕ ಭಜನೆಗಳನ್ನು ಬರೆದರು. ಅವುಗಳಲ್ಲಿ ಭಜಗೋವಿಂದಂ ಎಂಬುದು ಮುಖ್ಯವಾದುದು. ಅಷ್ಟೇ ಅಲ್ಲ ಶಂಕರರು ಆರು ಮಠಗಳನ್ನು ಸ್ಥಾಪಿಸಿದ್ದು. ಇಂದು ಆ ಮಠಗಳು ಶಂಕರರ ಜೀವನ, ದೃಷ್ಟಾಂತಗಳನ್ನು ಹೊತ್ತು ನಾಡಿನಲ್ಲಿ ಪುಣ್ಯಕ್ಷೇತ್ರಗಳಾಗಿ ರಾರಾಜಿಸುತ್ತವೆ. ಅದ್ವೈತ ಸಿದ್ಧಾಂತದ ದಿಗ್ವಿಜಯವನ್ನು ಮಾಡಿ ಹಿಂದೂ ಸಮಾಜದಲ್ಲಿದ್ದ ಅನೇಕ ಕ್ರೂರ ಪದ್ಧತಿಗಳನ್ನು ಖಂಡಿಸಿದರು. ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ಮನುಷ್ಯನಲ್ಲಿರುವ ಜೀವಾತ್ಮ ಪ್ರಪಂಚಕ್ಕೆಲ್ಲ ಇರುವ ಆತ್ಮವಾದ ಬ್ರಹ್ಮನ್ಗಳೆರಡಕ್ಕೂ ಬೇರೆ ಬೇರೆಯಲ್ಲ. ಅವು ಒಂದೇ ಜ್ಞಾನ ಮಾರ್ಗದಿಂದ ಮನುಷ್ಯನ ಆತ್ಮವು ಬ್ರಹ್ಮನೊಡನೆ ಸೇರಿಕೊಳ್ಳುತ್ತದೆ. ಇದನ್ನು ನಾವು ಮೋಕ್ಷವೆಂದು ಕರೆಯುತ್ತೇವೆ. ಬ್ರಹ್ಮನು ಸತ್ಯ. ಅದು ನಿರ್ಗುಣ ಅದಕ್ಕೆ ಲಕ್ಷಣಗಳಿಲ್ಲ ಮತ್ತು ಆಕಾರವಿಲ್ಲ. ಜಗತ್ತು ಒಂದು ಮಾಯೆ, ಬ್ರಹ್ಮನು ಮಾತ್ರ ಸತ್ಯ. ಎಂಬ ಸರ್ವಕಾಲಕ್ಕೂ ಸತ್ಯವಾದ ಅದ್ವೈತ ತತ್ವಜ್ಞಾನವನ್ನು ಶ್ರೀ ಶಂಕರಾಚಾರ್ಯರು ಬೋಧಿಸಿ ಪ್ರತಿಪಾದಿಸಿದರು.
ಇಂಥ ಅಸಾಧಾರಣ, ಅಲೌಕಿಕ ಗುಣಗಳಿಂದ ಕೂಡಿದ ಆಧ್ಯಾತ್ಮ ಮೇರುವಾದ, ಬ್ರಹ್ಮಜ್ಞಾನಿಯಾದ ವ್ಯಕ್ತಿ ಭಾರತದ ಈ ಪುಣ್ಯಭೂಮಿಯಲ್ಲಿ ಅವತರಿಸಿ ಭಾರತವನ್ನು ಉದ್ಧರಿಸಿದರು. ಎಂಬುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ವಿಷಯವಾಗಿದೆ. ಮತ್ತು ಶ್ರೀ ಶಂಕರ ಭಗವತ್ಪಾದರು ಭಾರತದ ಉದ್ಧಾರಕ್ಕಾಗಿ ಮಾಡಿದ ಮಹಾಕಾರ್ಯಗಳಿಗಾಗಿ ಪ್ರತಿಯೊಬ್ಬ ಭಾರತೀಯನ ಶಿರಸ್ಸು ಕೃತಜ್ಞತೆಯಿಂದಾ ಅವರ ಅಡಿದಾವರೆಗಳಿಗೆ ಬಾಗುತ್ತದೆ.
ಹೀಗೆ ಶಂಕರರು ಪರಮಮೂರ್ತಿ ಆಗಿ ಭವ ಬಂಧನದ ಭಾಗ್ಯವನ್ನು ತೊರೆದು ಸನ್ಯಾಸಿಯ ಶಿಖರವೇರಿ ಜಗಕ್ಕೆ ಬಡಿದ ಅಜ್ಞಾನದ ಕತ್ತಲೆಯನ್ನು ಓಡಿಸಿ ಸುಜ್ಞಾನವನ್ನು ಬೆಳಗಿಸಲು ಬಂದ ಮಹಾ ಪುರುಷನಷ್ಟೇ ಅಲ್ಲ, ಆ ಕಾಲದಲ್ಲಿ ಸಾಹಿತ್ಯಕೃಷಿ ಕೈಗೊಂಡ ಜನ ಸಮೂಹಕ್ಕೆ ಮಿಂಚುವ ಕಂಚಿನ ನುಡಿಗಳನ್ನು ಬೋಧಿಸಿದ ಒಬ್ಬ ಯುಗ ಪುರುಷನು, ಸಮಾಜ ಸುಧಾರಕನೂ ಹೌದು. ತನ್ನ ತತ್ವಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿ ಕಿಂಕರರಾದ, ಸಮೂಹ ಶಿಷ್ಯ ಬಳಗಕ್ಕೆ ಜ್ಞಾನರಾಶಿ ತುಂಬಿ ತತ್ವಜ್ಞಾನದ ಪರ್ವತವನ್ನೇರಿ ಸಮಾಜ ಚಿಂತಕರಾಗಿ ತೇಜಪುಂಜದಂತೆ ಬೆಳಗಿದರು.
ಗದುಗಿನ ಸಂಭಾಪೂರ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಂಕರಮಠದ ಮೂಲಕ ಶ್ರೀ ಶಂಕರರ ಅದ್ವೈತ ತತ್ವ, ತಾತ್ವಿಕ ಸಮಾನತೆಯ, ಸಂದೇಶಗಳು, ಎಲ್ಲೆಡೆ ಪಸರಿಸಲಿ ಎಂಬುದೇ ಶಂಕರ ಭಕ್ತರ ಹಾರೈಕೆ ಆಗಿದೆ.
- ಪ್ರೊ. ಅನಿಲ ವೈದ್ಯ
- * * * -