ಬಳ್ಳಾರಿ

ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಪರ ಜಿಲ್ಲಾಧಿಕಾರಿ ಮಂಜುನಾಥ

ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಪರ ಜಿಲ್ಲಾಧಿಕಾರಿ ಮಂಜುನಾಥ

ಬಳ್ಳಾರಿ 28: ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಸಮರ​‍್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರಧಾನಮಂತ್ರಿ 15 ಹೊಸ ಅಂಶಗಳ ಸರ್ಕಾರದ ಯೋಜನೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ವರ್ಗಗಳಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು;ಇದು ಪ್ರತಿಯೊಬ್ಬ ಅಧಿಕಾರಿಗಳ ಜವಾಬ್ದಾರಿ ಎಂಬುದನ್ನು ಅರಿತುಕೊಂಡು ಕಾರ್ಯನಿರ್ವಹಿಸಿ ಎಂದರು. 

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಅನುಷ್ಠಾನಗೊಳಿಸುವುದರ ಮೂಲಕ ಗುರಿ ಸಾಧಿಸಬೇಕು ಮತ್ತು ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. 

ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಲ್ಲಿ 2021-22ನೇ ಸಾಲಿನಡಿ ಎನ್‌.ಎಸ್‌.ಪಿ/ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಪುನರಾವರ್ತಿತ ವಿದ್ಯಾರ್ಥಿಗಳು 12822, ಹೊಸದಾಗಿ ನೊಂದಾಯಿಸಿಕೊಂಡವರು 17,434 ಸೇರಿದಂತೆ ಒಟ್ಟು 30,256 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಎನ್‌ಎಸ್‌ಪಿ ಅಡಿಯಲ್ಲಿ 28741 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದುಕೊಂಡಿದ್ದು, ಉಳಿದ 1515 ವಿದ್ಯಾರ್ಥಿಗಳ ಅರ್ಜಿಗಳು ಪರೀಶೀಲನಾ ಹಂತದಲ್ಲಿವೆ ಎಂದರು. 

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ಇನ್ನೂ ಪಾವತಿಯಾಗದ ಹಾಗೂ ಪರೀಶೀಲನಾ ಹಂತದಲ್ಲಿರುವ ವಿದ್ಯಾರ್ಥಿಗಳ ಶಿಷ್ಯವೇತನವು ಶೀಘ್ರದಲ್ಲಿಯೇ ಖಾತೆಗೆ ಜಮಾ ಆಗಬೇಕು. ಆಧಾರ್ ಸೀಡಿಂಗ್ ಸಮಸ್ಯೆ ಹಾಗೂ ಸ್ಕಾಲರ್‌ಶಿಪ್ ತಂತ್ರಾಂಶದಲ್ಲಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪ್ರತಿ ತಿಂಗಳು ನಡೆಯುವ ಉದ್ಯೋಗ ಮೇಳದಲ್ಲಿ ಅಲ್ಪಸಂಖ್ಯಾತ ವರ್ಗಗಳ ಅಭ್ಯರ್ಥಿಗಳು ಏಪ್ರೀಲ್ 01ರಿಂದ ಜೂನ್ 30ರವರೆಗೆ ಒಟ್ಟು 4200 ಅಭ್ಯರ್ಥಿಗಳು ಹೆಸರನ್ನು ನೊಂದಾಯಿಸಿಕೊಂಡಿದ್ದು, ಸರ್ಕಾರಿ ವಲಯದಲ್ಲಿ 02 ಹುದ್ದೆ ಮತ್ತು ಖಾಸಗಿ ವಲಯದಲ್ಲಿ 20 ಅಭ್ಯರ್ಥಿಗಳು ಹುದ್ದೆ ಪಡೆದುಕೊಂಡಿದ್ದಾರೆ ಎಂದು ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್‌.ಹಟ್ಟಪ್ಪ ಅವರು ಸಭೆಗೆ ತಿಳಿಸಿದರು. 

ಅಲ್ಪ ಸಂಖ್ಯಾತರ ವಸತಿ ನಿಗಮದಲ್ಲಿ ವಸತಿ ನಿರಾಶ್ರಿತರಿದ್ದಲ್ಲಿ ಅಂತವರನ್ನು ಗುರುತಿಸಿ, ವಸತಿ ನಿರ್ಮಾಣ ಮಾಡಿಕೊಳ್ಳುವಂತೆ ಅನುವು ಮಾಡಿಕೊಡಬೇಕು ಹಾಗೂ ಒಂದು ಬಾರಿ ಫಲಾನುಭವಿಗಳಾಗಿದ್ದಲ್ಲಿ, ಅಂತವರಿಗೆ ಮತ್ತೊಮ್ಮೆ ಯೋಜನೆ ನೀಡಬಾರದು. ಮುಖ್ಯವಾಗಿ ಕಡುಬಡವರಾಗಿದ್ದಲ್ಲಿ, ಇರಲು ಮನೆ ಇಲ್ಲದಿದ್ದಲ್ಲಿ ಅಂತವರಿಗೆ ನೀಡಬೇಕು ಎಂದು ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಅವರು  ಇದುವರೆಗೆ ಫಲಾನುಭವಿಗಳ ಪಟ್ಟಿ ಅಂತಿಮವಾಗದಿರುವುದು ಸರಿಯಲ್ಲ;ಕೂಡಲೇ ಶಾಸಕರುಗಳಿಂದ ಪಟ್ಟಿ ಪಡೆದುಕೊಂಡು ಶೀಘ್ರದಲ್ಲಿಯೇ ಗುರಿ ಸಾಧಿಸಬೇಕು ಎಂದು ಅವರು ಸೂಚನೆ ನೀಡಿದರು. 

ಈ ಬಾರಿ ತೋಟಗಾರಿಕೆ ಇಲಾಖೆಯಿಂದ ಯಾವುದೇ ಅನುದಾನ ಬಿಡುಗಡೆಯಾಗದಿದ್ದರೂ ಕಾಯ್ದಿರಿಸಿದ ಅನುದಾನದಲ್ಲಿ ಶೇ.15ರಷ್ಟು ಅನುದಾನ ಮೀಸಲಿರಿಸಿಟ್ಟು ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಭೆಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಪಿ.ಭೋಗಿ ಅವರು ತಿಳಿಸಿದರು. 

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ 60ವರ್ಷ ಮೇಲ್ಪಟ್ಟ ಹಾಗೂ 18ವರ್ಷ ಮೇಲ್ಪಟ್ಟವರಿಗೆ ಕೋವಿಡ್‌-19 ಮುನ್ನೆಚ್ಚರಿಕಾ ಡೋಸ್‌ನ್ನು ಅಲ್ಪಸಂಖ್ಯಾತ ವರ್ಗದವರು ಎಷ್ಟು ಜನ ಪಡೆದುಕೊಂಡಿದ್ದಾರೆ ಎಂಬುದರ ಅಂಕಿ-ಅಂಶ ಸಂಗ್ರಹಿಸಿ ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. 

ಇದೇ ಸಂದರ್ಭದಲ್ಲಿ ಎಷ್ಟು ಜನ ಅಲ್ಪಸಂಖ್ಯಾತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡಿದ್ದಾರೆ ಎಂಬುದರ ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು. 

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ನಿಗದಿಪಡಿಸಲಾದ ಗುರಿ ಸಾಧಿಸಬೇಕು;ಅದರ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪ್ರಧಾನ ಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳ ಇಡೀ ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಶೇ.15ರಷ್ಟು ಮೀಸಲಿದ್ದು, ಯೋಜನೆಗಳು ಅಲ್ಪಸಂಖ್ಯಾತ ವರ್ಗದವರಿಗೆ ಸಮರ​‍್ಕ ಮಾಹಿತಿ ಲಭ್ಯವಾಗುತ್ತಿದೆಯೇ? ಇಲ್ಲವೋ? ಎಂಬುದನ್ನು ಅಧಿಕಾರಿಗಳು ಪರೀಶೀಲನೆ ನಡೆಸಬೇಕು ಹಾಗೂ ಮಾಹಿತಿ ಕೊರತೆಯಿಂದ ಸೌಲಭ್ಯ ವಂಚಿತರಾಗಬಾರದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನಾಶ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪದಾಧಿಕಾರಿಗಳು ಹಾಜರಿದ್ದರು. 


ಸುದ್ದಿ ಓದಿ