ವಿಶ್ವಕರ್ಮರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಿ
ತಾಳಿಕೋಟೆ 06: ಮೀಸಲಾತಿ ಅಸ್ಪೃಷ್ಯತೆಯಲ್ಲ. ಅದು ನಮಗೆ ವರವಾಗಲಿದೆ. ಡಾ.ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಬರೆದಿರುವಂತೆ ಶೋಷಿತ ಸಮಾಜ ವೃತ್ತಿಗಳನ್ನು ಮಾಡಿಕೊಂಡು ಬದುಕಲು ಕಷ್ಟವಾಗುತ್ತದೋ ಅವರಿಗೆಲ್ಲ ಮೀಸಲಾತಿ ನೀಡಬೇಕು ಎಂದಿದೆ. ವೃತ್ತಿಯಿಂದ ಬದುಕಲು ಕಷ್ಟವಾಗುತ್ತಿದ್ದು ವಿಶ್ವಕರ್ಮ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎಂದು ವಿಧಾನಪರಿಷತ್ತಿನ ಸದಸ್ಯ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಅವರು ರವಿವಾರ ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ನಡೆದ ತಾಳಿಕೋಟೆ ತಾಲೂಕಿನ ವಿಶ್ವಕರ್ಮ ಸಮಾಜದ ಬೃಹತ್ ಸಮಾವೇಶದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವು ವಿಶ್ವ ಬ್ರಾಹ್ಮಣರಲ್ಲ, ಅದು ಒಂದು ಪಂಗಡವಷ್ಟೇ, 39 ಪಂಗಡಗಳ ನಂತರ ಬರುವುದು ವಿಶ್ವಕರ್ಮ ಸಮಾಜ. ನಮಗೆ ವಿಶ್ವಬ್ರಾಹ್ಮಣರೆಂಬ ಭ್ರಮೆ ಹುಟ್ಟಿಸುತ್ತಿದ್ದಾರೆ. ನಾವು ಒಂದು ಶೋಷಿತ ಸಮಾಜ. 40 ಲಕ್ಷ ಜನರಿದ್ದೇವೆ. ಆದ್ರೂ ಮೀಸಲಾತಿ ದೊರೆತಿಲ್ಲ. ನಮ್ಮವರಿಗೆ ರಾಜಕೀಯ ಅರ್ಥವಾಗುತ್ತಿಲ್ಲ. ಎಚ್ಚೆತ್ತುಕೊಳ್ಳಿ, ಒಗ್ಗಟ್ಟಾಗಿ, ರಾಜಕೀಯ ಪ್ರಾತಿನಿಧ್ಯ ನಮಗೆ ಆರ್ಥಿಕ ಸಬಲತೆ, ಶಿಕ್ಷಣ, ಉದ್ಯೋಗ ಒದಗಿಸಿ ಗೌರವಯುತ ಬದುಕಿಗೆ ಆಸರೆಯಾಗಲಿದೆ. ನಮಗೆ ಸರ್ಕಾರಗಳಿಂದ ಸಮುದಾಯ ಭವನಗಳು ಬೇಕಿಲ್ಲ, ರಾಜಕೀಯ ಪ್ರಾತಿನಿದ್ಯ ಬೇಕು. ಗುಡಿಗೋಪುರದ ಕಟ್ಟಿದವರು, ನಾಡಿನ ನಾಗರಿಕತೆಗೆ ಕೈ ಹಿಡಿದವರು, ಹುಟ್ಟಿನಿಂದ ಚಟ್ಟದವರೆಗೆ ಎಲ್ಲರ ಬದುಕಿಗೆ ಬೇಕಾಗಿ ಜನಸೇವೆಯಲ್ಲಿದ್ದೇವೆ. ನಮ್ಮ ಬಗ್ಗೆ ನಾವು ಮಾತನಾಡಬಾರದು ಬೇರೆಯವರು ಮಾತನಾಡಬೇಕು ದೇವರನ್ನು ನಿರ್ಮಾಣ ಮಾಡಿದರೂ ಗರ್ಭಗುಡಿಯಿಂದ ನಾವು ಹೊರಗೆ ನಿಲ್ಲಬೇಕಾಗಿದೆ ಎಂದರು.
ಮುದ್ದೇಬಿಹಾಳ ಶಾಸಕ ಎ..ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಜೀವ ತುಂಬುವ ಕೆಲಸ ವಿಶ್ವಕರ್ಮರದು, ಪ್ರತಿ ವಸ್ತುವಿನಲ್ಲೂ ತಮ್ಮ ಚಾಕಚಕ್ಯತೆಯಿಂದ ಎಲ್ಲ ಬಗೆಯ ವಸ್ತುಗಳಲ್ಲೂ ಜೀವ ತಂದವರು. ದೇಶದ ಭವ್ಯ ದೇವಸ್ಥಾನಗಳಲ್ಲಿರುವ ಕೌಶಲ್ಯಪೂರ್ಣ, ಬೆಲೆಕಟ್ಟಲಾಗದ ತಂತ್ರಜ್ಞಾನ ಅವರದು. ಸ್ವಾತಂತ್ರಾ-್ಯ ನಂತರ ಗ್ರಾಮೀಣ ಭಾಗದಲ್ಲಿನ ಜನತೆಗೆ ಆಧುನಿಕತೆ ಸವಾಲಾಗಿದೆ ಬದುಕು ಕಷ್ಟವಾಗಿದೆ. ಎಸ್.ಟಿ ಜನಾಂಗಕ್ಕೆ ಅವರನ್ನು ಸೇರಿಸಬೇಕೆಂಬ ಹಂಬಲಕ್ಕೆ ಬೆಂಬಲಿಸುವೆ ಎಂದರು.
ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ವಿಶ್ವದಲ್ಲಿ ಆವಿಷ್ಕಾರ ಆರಂಭವಾಗಿದ್ದೆ ವಿಶ್ವಕರ್ಮ ಸಮಾಜದಿಂದ. ಭೂಮಿಯ ಎಲ್ಲ ಮಾನವ ಜನಾಂಗದ ವೃತ್ತಿಗಳಿಗೆ, ಬದುಕಿಗೆ ನೆರವಾದ ಸಮಾಜವಾಗಿದೆ ಎಂದರು.
ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಭಾರತ ಸರ್ಕಾರದ ದಿ ಶಿಪ್ಪಿಂಗ್ ಕಾರ್ೋರೇಶನ್ ಆಪ್ ಇಂಡಿಯಾದ ನಿರ್ದೇಶಕ ಶ್ರೀಕಾಂತ ಪತ್ತಾರ, ಹೃದಯತಜ್ಞ ಡಾ.ಶಂಕ್ರಗೌಡ ಪಾಟೀಲ, ಸಾನ್ನಿಧ್ಯವನ್ನು ವಹಿಸಿದ್ದ ನಾಲತವಾಡದ ಬ್ರಹ್ಮಾಂಡಭೇರಿಮಠದ ಗಂಗಾಧರಸ್ವಾಮೀಜಿ, ತಿಳಗೂಳದ ಶ್ರೀಚಕ್ರಬಗಳಾಂಬಾ ಶಕ್ತಿಪೀಠದ ಮಹೇಂದ್ರಾನಂದತೀರ್ಥ ಸ್ವಾಮೀಜಿ, ಕಲಕೇರಿಯ ಸಾಹಿತಿ ಮನು ಪತ್ತಾರ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ, ಎಸ್.ಎಸ್.ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ, ಮುದ್ದೇಬಿಹಾಳ ಪುರಸಭೆ ಸದಸ್ಯೆ ಸಹನಾ ಬಡಿಗೇರ, ನಿವೃತ್ತ ಶಿಕ್ಷಕ ಆರ್.ಆರ್.ಬಡಿಗೇರ, ಪತ್ರಕರ್ತ ಜಿ.ಟಿ.ಘೋರೆ್ಡ, ಮುದ್ದೇಬಿಹಾಳ ತಾಳಿಕೋಟೆ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಇತರರಿದ್ದರು. ಬೆಳಿಗ್ಗೆ ಅಂಬಾಭವಾನಿ ಮಂದಿರದಿಂದ ಸಭಾಭವನದವರೆಗೆ ವಿಶ್ವಕರ್ಮರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಗಮನ ಸೆಳೆದವು ಸಮಾಜದ ತಾಲ್ಲೂಕಾ ಘಟಕದ ಅಧ್ಯಕ್ಷ ಪ್ರಭಾಕರ ಬಡಿಗೇರ ಸ್ವಾಗತಿಸಿದರು. ಸಾಹಿತಿಗಳಾದ ಅಶೋಕ ಹಂಚಲಿ, ಸುಮಂಗಲಾ ಕೋಳೂರ ನಿರ್ವಹಿಸಿದರು. ಕಾಳಪ್ಪ ಇವಣಗಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಗೋಪಾಲಕೃಷ್ಞ ಪತ್ತಾರ ವಂದಿಸಿದರು.