ನಟಿ ತ್ರಿಷಾ, ನಿರ್ದೇಶಕ ಮಣಿರತ್ನಂ ಬಂಧಿಸಬೇಕು; ಹಿಂದೂ ಸಂಘಟನೆಗಳ ಆಗ್ರಹ
ಇಂದೋರ್, ಸೆ 5 : ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿರುವ ನಟಿ ತ್ರಿಷಾ, ನಿರ್ದೇಶಕ ಮಣಿ ರತ್ನಂ ಅವರನ್ನೂ ಕೂಡಲೇ ಬಂಧಿಸಬೇಕೆಂದು ಹಿಂದೂ ಸಂಘಟನೆಗಳ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ಭಾರಿ ಬಜೆಟ್ ನ ಚಾರಿತ್ರಿಕ ಕಥೆ ಆಥಾರಿತ ಪೊನ್ನಿಯನ್ ಸೆಲ್ವನ್ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ, ತ್ರಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಪ್ರಸ್ತುತ ಇಂದೋರ್ನಲ್ಲಿ ನಡೆಯುತ್ತಿದೆ.
ಶುಕ್ರವಾರ, ತ್ರಿಷಾ ಕಾರಿನಿಂದ ಇಳಿದು ಚಪ್ಪಲಿ ಧರಿಸಿ ಶಿವ ಹಾಗೂ ನಂದಿ ವಿಗ್ರಹಗಳ ನಡುವೆ ನಡೆದುಕೊಂಡು ಬಂದ ದೃಶ್ಯಗಳನ್ನು ಚಿತ್ರೀಕರಿಸಿದರು. ಆದರೆ ಹಿಂದೂಗಳು ಪವಿತ್ರವೆಂದು ಭಾವಿಸುವ ದೇವರ ಮೂರ್ತಿಗಳಿರುವ ಪ್ರದೇಶಕ್ಕೆ ತ್ರಿಷಾ ಚಪ್ಪಲಿ ಧರಿಸಿ ಬಂದಿದ್ದನ್ನು ಹಿಂದೂ ಸಮುದಾಯದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ತ್ರಿಷಾ, ನಿರ್ದೇಶಕ ಮಣಿರತ್ನಂ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಹರಿಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.