ಮನರಂಜನೆ

ನಟ ನೆಡುಮುಡಿ ವೇಣು ನಿಧನ: ಸಂತಾಪ

ನಟ ನೆಡುಮುಡಿ ವೇಣು ನಿಧನ: ಸಂತಾಪ

ತಿರುವನಂತಪುರಂ, ಅ. 11: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಹಿರಿಯ ನಟ ನೆಡುಮುಡಿ ವೇಣು ಕೊನೆಯುಸಿರೆಳೆದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಪತ್ನಿ ಟಿಆರ್ ಸುಶೀಲ ಮತ್ತು ಇಬ್ಬರು ಪುತ್ರರಾದ ಉನ್ನಿ ಮತ್ತು ಕಣ್ಣನ್ ಅವರನ್ನು ಅಗಲಿರುವ ವೇಣು, 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ನೆಡುಮುಡಿ ವೇಣು ಅವರಿಗೆ ಭಾನುವಾರ ಬೆಳಿಗ್ಗೆ ಹೊಟ್ಟೆ ಸಂಬಂಧಿತ ಕಾಯಿಲೆಯಿಂದ ಅಸ್ವಸ್ಥತೆ ಉಂಟಾಗಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು.

ವೇಣು ನಿಧನಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೋಮವಾರ ಸಂತಾಪ ಸೂಚಿಸಿದ್ದಾರೆ.

"ಮಲಯಾಳಂ ಮತ್ತು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾದ ನೆಡುಮುಡಿ ವೇಣು ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ" ಎಂದು ರಾಜ್ಯಪಾಲರು ಹೇಳಿದ್ದಾರೆ

ಸಾಂಪ್ರದಾಯಿಕ ಕಲಾ ಪ್ರಕಾರಗಳ ಆಳವಾದ ಜ್ಞಾನ ಮತ್ತು ಭಾರತೀಯ ನಟನಾ ಶೈಲಿಯು ಅವರ ಅನನ್ಯ, ಆಕರ್ಷಕ ಪ್ರದರ್ಶನಗಳಲ್ಲಿ ಪ್ರತಿಫಲಿಸುತ್ತದೆ ಎಂದಿದ್ದಾರೆ.

"ಕೇರಳದ ಶಾಸ್ತ್ರೀಯ ಮತ್ತು ಜಾನಪದ ಕಲೆ ಮತ್ತು ಲಯದಲ್ಲಿ ಪಾಂಡಿತ್ಯ ಹೊಂದಿದ್ದ ಅವರು ರಂಗಭೂಮಿಯಲ್ಲಿ ಮತ್ತು ಸಂಗೀತದಲ್ಲಿಯೂ ಉತ್ತಮ ಸಾಧನೆ ಮಾಡಿದರು."

"ಅವರದು ಕಲೆಗೆ ಮೀಸಲಾದ ಜೀವನ. ನನ್ನ ಹೃದಯಪೂರ್ವಕ ಸಂತಾಪವಿದ್ದು, ಅವರ ಆತ್ಮಕ್ಕೆ ಮುಕ್ತಿ ಸಿಗಲಿ" ಎಂದು ರಾಜ್ಯಪಾಲರು ಹೇಳಿದ್ದಾರೆ.

ಸುದ್ದಿ ಓದಿ