ಮುಂದಗೋಡ

ಚರಂಡಿಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸುವ ಕ್ರಮ ಕೈಗೊಳ್ಳಬೇಕು: ದೇವರಾಜ

ಚರಂಡಿಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸುವ ಕ್ರಮ ಕೈಗೊಳ್ಳಬೇಕು: ದೇವರಾಜ

ಲೋಕದರ್ಶನ ವರದಿ 

ಮುಂಡಗೋಡ:ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಪ್ರಕೃತಿ ವಿಕೋಪದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶುಕ್ರವಾರ ಶಿರಸಿ ಉಪವಿಭಾಗಾಧಿಕಾರಿ ಆರ್‌.ದೇವರಾಜ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು.  

ಈಗಾಗಲೆ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೂ ಮತ್ತೊಮ್ಮೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಪ.ಪಂ.ಮುಖ್ಯಾಧಿಕಾರಿಗಳಿಗೆ ಮತ್ತು ಗ್ರಾ.ಪಂ.ಅಧಿಕಾರಿಗಳಿಗೆ ಸೂಚಿಸಲಾಯಿತು. ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿ ಇದ್ದರೆ ಅವುಗಳನ್ನು ಬದಲಾಯಿಬೇಕು ಮತ್ತು ಹಾಳಾದ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು ಎಂದು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ರಸ್ತೆಗಳ ಬದಿಯಲ್ಲಿ ಬಹಳ ಹಳೆಯದಾದ ಮರಗಳು ಇದ್ದರೆ ಅವುಗಳನ್ನು ಅರಣ್ಯ ಇಲಾಖೆ ಸಹಾಯದಿಂದ ಕಟಾವ್ ಮಾಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು. 

ತಾಲೂಕಿನ ನೆರೆ ಸಂಭವಿಸಬಹುದಾದ ಗ್ರಾಮಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮ, ಕೆರೆ ಮತ್ತು ಡ್ಯಾಂಗಳ ನಿರ್ವಹಣೆ, ಜಾನುವಾರುಗಳ ಸ್ಥಳಾಂತರ, ಸಂತ್ರಸ್ತರ ಸ್ಥಳಾಂತರ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 

ಈ ವೇಳೆ ತಹಶೀಲ್ದಾರ ಶ್ರೀಧರ ಮುಂದಲಮನಿ, ತಾ.ಪಂ.ಇಒ ಪ್ರವೀಣ ಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ, ಆರ್‌.ಎಫ್‌.ಒ.ಸುರೇಶ ಕುಳ್ಳೊಳ್ಳಿ, ಅಜಯ ನಾಯ್ಕ, ರಾಘವೇಂದ್ರ ಗಿರಡ್ಡಿ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ