ಬಳ್ಳಾರಿ

ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ: ಜಿಲ್ಲಾಧಿಕಾರಿ

ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ: ಜಿಲ್ಲಾಧಿಕಾರಿ

ಬಳ್ಳಾರಿ 21:  ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದರು. 

  ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸರ್ಕಾರದ ಮಾರ್ಗಸೂಚಿ ಅನ್ವಯ ನವೆಂಬರ್ 1 ರಂದು ಬೆಳಗ್ಗೆ 9 ಕ್ಕೆ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಚರಿಸಲಾಗುವುದು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜರೋಹಣ ಮಾಡುವರು ಎಂದು ತಿಳಿಸಿದ ಜಿಲ್ಲಾಧಿಕಾರಿ ಅವರು ರಾಜ್ಯೋತ್ಸವದಲ್ಲಿ ಎಲ್ಲಾ ಕನ್ನಡ ಪರ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದರು. 

  ಶಾಲೆ-ಕಾಲೇಜಿನ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಣೆ ಮಾಡಬೇಕು ಎಂದು ತಿಳಿಸಿದ ಅವರು ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತದೆ ಎಂದರು. 

 ಈ ಹಿಂದೆ ಕೋವಿಡ್‌ನಿಂದ ರದ್ದಾದ ರಾಜ್ಯೋತ್ಸವದ ಮೆರವಣಿಗೆಯನ್ನು ಈ ವರ್ಷ ಅತ್ಯಂತ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡೋಣ ಎಂದು ಕನ್ನಡಪರ ಸಂಘಟನೆಗಳು ವಿನಂತಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳಿಂದ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡಬೇಕು ಹಾಗೂ ವಿವಿಧ ಕಲಾತಂಡಗಳನ್ನು ಕರೆಸಬೇಕು ಎಂದು ತಿಳಿಸಿದರು. 

 ಅ.31 ರೊಳಗೆ ನಾಮಫಲಕ ಅಳವಡಿಕೆ: ರೆಸ್ಟೋರೆಂಟ್, ಅಂಗಡಿಮುಂಗಟ್ಟು ಸೇರಿದಂತೆ ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು. ಅ.31ರೊಳಗಾಗಿ ಸಂಪೂರ್ಣವಾಗಿ ನಾಮಫಲಕ ಅಳವಡಿಸುವ ಕಾರ್ಯ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ನ.1 ರಿಂದ ಒಂದು ವಾರದ ಕಾಲ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶಿಸುವಂತೆ ಸೂಚಿಸಿದರು. 

ಗಡಿ ಹಂಚಿಕೊಂಡಿರುವ ಕಾರಣ ತೆಲುಗು ಪ್ರಾಬಲ್ಯವಿದ್ದು, ದಿನೇ ದಿನೇ ಕನ್ನಡ ಭಾಷೆ ಬಳಸುವುದು ಜಾಸ್ತಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಬಳಸುವಂತಾಗಬೇಕು. ರಾಜ್ಯೋತ್ಸವದಂದು ಸಂಜೆ ರಾಘವ ಕಲಾಮಂದಿರದಲ್ಲಿ ವಿವಿಧ ಶಾಲಾ ಕಾಲೇಜುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಆಕಾಶ್ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ರುದೇಶ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ