ಸಿರುಗುಪ್ಪ ಬಳಿ ಕಾರು-ಲಾರಿ ನಡುವೆ ಡಿಕ್ಕಿ: ಕರ್ಫ್ಯೂ ಹಿನ್ನೆಲೆಯಲ್ಲಿ ಊರಿಗೆ ಹೊರಟಿದ್ದ ನಾಲ್ವರು ಸಾವು
ಬಳ್ಳಾರಿ, ಏಪ್ರಿಲ್ 28 : ಜಿಲ್ಲೆಯ ಸಿರುಗುಪ್ಪ ಪಟ್ಟಣದ ಬಳಿ ಬುಧವಾರ ಕಾರ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ನತದೃಷ್ಟರು ಕಲಬುರಗಿ ಜಿಲ್ಲೆಯ ಚಿಂಚೋಲಿ ತಾಲ್ಲೂಕಿನ ಚಿಮ್ಮದಲಾಐಈ ಮತ್ತು ಕೊರಡಂಪಳ್ಳಿ ಗ್ರಾಮದವರಾಗಿದ್ದಾರೆ. ಮೃತರನ್ನು ಬಳ್ಳಾರಿಯ ವಾಣಿಜ್ಯ ತೆರಿಗೆ ನಿರೀಕ್ಷಕ ಬಸವರಾಜ್ ಭೀಮರಾವ್ ಬೆಳ್ಳೂರ್ (52), ಅವರ ಪುತ್ರ ವೈದ್ಯಕೀಯ ವಿದ್ಯಾರ್ಥಿ ಭೀಮರಾವ್ ಬೆಳ್ಳೂರ್ (30), ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುನಿಲ್ ಶಿವರಾಜ್ ಪಾಟೀಲ್ (30), ಮತ್ತು ಕಾರು ಚಾಲಕ ರೇವನಸಿದ್ದ ಬಸವರಾಜ್ ಕೊರಡಂಪಳ್ಳಿ (30) ಎಂದು ಗುರುತಿಸಲಾಗಿದೆ.
ಕೋವಿಡ್ -19 ಉಲ್ಬಣ ತಡೆಗೆ 14 ದಿನಗಳ ರಾಜ್ಯವ್ಯಾಪಿ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿಗೆ ಹೊರಟಿದ್ದಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿರುಗುಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.