ಒಂದು ಗಜಲ್ ಕುರಿತು
ಕನ್ನಡದ ಪ್ರಮುಖ ಹಿರಿಯ ಕವಿ ದಿ. ಜಂಬಣ್ಣ ಅಮರಚಿಂತರು. ಕನ್ನಡದಲ್ಲಿ 1970ರ ದಶಕದಲ್ಲಿ ಬಂಡಾಯ ಮತ್ತು ದಲಿತ ಕಾವ್ಯ ಪ್ರಕಾರ ಮುನ್ನೆಲೆಗೆ ಬಂದಾಗ ಅವರು ಅದನ್ನು ಸಶಕ್ತವಾಗಿ ಬಳಸಿಕೊಂಡರು. ಕಾವ್ಯ, ಕಾದಂಬರಿ, ಗಜಲ್, ಚುಟುಕು ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅಗಾಧವಾದುದನ್ನೇ ಸಾಧಿಸಿದರು. ಉರ್ದು ಮತ್ತು ತೆಲಗು ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿದ್ದ ಕನ್ನಡದ ಮೊದಲ ಗಜಲಕಾರರಲ್ಲಿ ಒಬ್ಬರು ಅವರು. ಬರೀ ಗಂಡು ಹೆಣ್ಣಿನ ಮಧುರ ಆಲಾಪವಾಗಿದ್ದ ಗಜಲ್ ಕಾವ್ಯವನ್ನು ಶೋಷಣೆಯ, ಸಾಮಾಜಿಕ ತಲ್ಲಣವನ್ನು ಅಭಿವ್ಯಕ್ತಿಸುವ ರೂಪವನ್ನಾಗಿ ಬಳಸಿದವರಲ್ಲಿ ಅವರೇ ಪ್ರಮುಖರು. "ಮುಳ್ಳಿನ ಬಾಯಲ್ಲಿ ಹೂ ನಾಲಗೆ", "ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ" ಎಂಬ ಎರಡು ಗಜಲ್ ಸಂಕಲನಗಳನ್ನು ಅವರು. ರಚಿಸಿದ್ದರು. ಅವರ ಒಂದು ಗಜಲ್ನ್ನು ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ನ "ಗಜಲ್ ಸಂಭ್ರಮ"ದಲ್ಲಿ ಸಂಕಲಿಸಿದ್ದಾರೆ.
ಬಹು ಸುಂದರವಾದ ಸಾಮಾಜಿಕ ಸಂದೇಶವಿರುವ ಗಜಲ್ ಇಲ್ಲಿದೆ. ಜ್ಞಾನವನ್ನು ಕೆಲವೇ ಕೆಲವರು ಗುತ್ತಿಗೆ ಹಿಡಿದು ಶತಮಾನಗಳ ಕಾಲ ಯಾರ ಕೈಗೂ ಸಿಗದಂತೆ ಕಾಪಾಡಿಕೊಂಡಿದ್ದ ದುರಂತ ಇತಿಹಾಸ ಈ ದೇಶದ್ದು.ಜ್ಞಾನ ಮುಕ್ತವಾಗಿರಬೇಕು ಮತ್ತು ಎಲ್ಲರಿಗೂ ಮುಕ್ತವಾಗಿ ಸಿಗಬೇಕು ಎಂಬ ಶರಣರ ಚಿಂತನೆ ಮತ್ತೆ ಶರಣ ರ ನಂತರ ಕೋಣೆಯ ಬಾಗಿಲು ನಲ್ಲಿ ಪ್ರತಿಬಂಧಿಸಲ್ಪಟ್ಟಿತು. ವೇದಾದಿ ಜ್ಞಾನಮೂಲವನ್ನು ಕೆಲವರೇ ಓದಬೇಕು, ಅದನ್ನು ಓದಲೂ ಇಂತಿಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂಬ ನಿಯಮ ವನ್ನು ಮಾಡಿ ಅಕಸ್ಮಾತ್ ಯಾರಾದರೂ ಕೆಳವರ್ಗದವರು ಕೇಳಿದರೆ ಅವರನ್ನು ಶಿಕ್ಷಿಸಬೇಕು ಎಂಬ ನಿಯಮವೇ ಇಲ್ಲಿನ ಸಾಮಾಜಿಕ ವ್ಯಸ್ಥೆಯಲ್ಲಿದ್ದಿತು. ಇಂತಹ ಒಂದು ಸಾಮಾಜಿಕ ವಿಸಂಗತಿ ಸ್ವಾತಂತ್ರ್ಯಾನಂತರವೂ ಮುಂದುವರಿದುದನ್ನು ಕಂಡ ಕವಿಯ ಮನಸ್ಸು ತಡೆದುಕೊಳ್ಳದೆ ಪ್ರತಿಭಟನೆಯ ರೂಪದಲ್ಲಿ ಗಜಲ್ ಕಟ್ಟಿದೆ. ಗಜಲ್ನ ಬೇರೆ ಬೆರೆ ಮುಶ್ರಾಗಳಲ್ಲಿ ಬೇರೆ ಬೇರೆ ವಿಚಾರಗಳನ್ನು ಈ ಗಜಲ್ ಹಿಡಿದಿಟ್ಟಿರುವದು ಗಜಲ್ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ಗಜಲ್ ಹೀಗಿದೆ -
ಮುಚ್ಚಿಟ್ಟು ಮುಚ್ಚಿಟ್ಟು ಯಾಕೆ? ಬಿಚ್ಚಿಡುತ ಕುಡಿಯಿರಿ
ಜ್ಞಾನದ ಮಧು ಮದಿರೆ ಎಲ್ಲರಿಗೆ ಕುಡಿಸುತ ಕುಡಿಯಿರಿ
ಕೊನೆತನಕೆ ಈ ಜೀವಕೆ ಜಂಜಾಟ ತಪ್ಪಿದ್ದಲ್ಲ ಬಿಡಿ
ನಲುಮೆಯ ಮಧುರಗೀತ ನುಡಿಸುತ ಕುಡಿಯಿರಿ
ದಶದಿಕ್ಕುಗಳಿಂದ ಇರುಳು ದಾಳಿ ಮಾಡುತಲಿದೆ
ಇರುಳ ಗರ್ಭದಲಿ ಬೆಳಕು ಚಿಗುರಿಸುತ ಕುಡಿಯಿರಿ
ಪೂರ್ವವೇನು ಪಶ್ಚಿಮವೇನು ಜ್ಞಾನದ ತೋಟ ಎಲ್ಲೆಡೆ ಅಡಗಿದೆ.
ವಿಶ್ವ ತೋಟದ ದ್ರಾಕ್ಷಾರಸ ಹಂಚುತ ಕುಡಿಯಿರಿ
ಮಲಗಿಸುವ ಅಮಲಲ್ಲಿ ಎಬ್ಬಿಸುತ ಅರಿವಿನ ಘಮಲು
ಮಲಗಿದ ಮನಗಳ ತಟ್ಟಿ ಎಚ್ಚರಿಸುತ ಕುಡಿಯಿರಿ
ಜೀವನವು ರಸವೂ ಹೌದು ವಿರಸವೂ ಹೌದು
ಜೀವನ ಸಮರಸದ ಸೋಮರಸ ಹಂಚುತ ಕುಡಿಯಿರಿ
ಇಲ್ಲಿ ಕುಡಿಯುವದು ಎನ್ನುವ ವಸ್ತು ಪಡೆದಿರುವ ವ್ಯಾಪ್ತಿ ಹೊಸದು. ಕುಡಿಯಲಿಕ್ಕಿರುವದು ಜ್ಞಾನ ದ ಮಧುಮದಿರೆ. ಅದನ್ನು ಎಲ್ಲರಿಗೆ ಹಂಚಿ ಎಲ್ಲರೊಂದಾಗಿ ಕುಡಿಯಬೇಕಿದೆ ಎನ್ನುವ ಗಜಲ್ "ಮುಚ್ಚಿಡುತ ಯಾಕೆ ಬಿಚ್ಚಿಡುತ ಕುಡಿಯಿರಿ" ಎಂದು ಘೋಷಿಸುತ್ತದೆ. ಜ್ಞಾನ ಎಲ್ಲರಿಗೂ ಸಮನಾಗಿ ವಿತರಣೆಯಾಗಬೇಕು ಎನ್ನುವ ಸದಾಶಯ ಇಲ್ಕಿನದು.
ಕವಿ ನಲುಮೆಯ ಪಕ್ಷಪಾತಿ. ಇಲ್ಲಿ ನಲುಮೆಯ ಮಧುರಗೀತೆ ಹಾಡಲಿ ಎನ್ನುವದು ಅವನ ಆಶೆ. ಕುಡಿಯುವಾಗ ಮೌನವಾಗಿ ಕುಡಿಯುವದೇನೂ ಬೇಡ, ಜೀವನ ಕಷ್ಟ ಕೋಟಲೆಗಳು ಯಾರಿಗೂ ತಪ್ಪಿಲ್ಲ, ಅದನ್ನು ಮರೆತು ನಗುತ ಕುಡಿಯಿರಿ ಎನ್ನುತ್ತಾನೆ. ಜ್ಞಾನದ ಹಾದಿ ಇರುವದೇ ಅದು ಸಂತಸವನ್ನು ಹಬ್ಬಿಸಲು ಮತ್ತು ಅದು ನಲುಮೆಯ ಮಧುರಗೀತೆ ಕೂಡ. ಅಂತಹ ನಲುಮೆಯ ಹಾಡು ಹಾಡುತ್ತ ಕುಡಿಯಬೇಕು. ಕುಡಿತ ಮತ್ತು ಹಾಡು ಸದಾ ಜೋಡಿ ಜೀವಗಳೇ. ಅವು ಒಂದನ್ನೊಂದು ಬಿಟ್ಟಿರಲಾರವು ಮತ್ತು ಜೀವನದ ಜಂಜಡವ ಅಳಿಯಲು ಅವೆರಡೇ ಸಾಧನ.
ಕತ್ತಲೆ ಎಲ್ಲಿಲ್ಲ? ಬೆನ್ನ ಹಿಂದೆಯೆ ದಾಳಿ ಮಾಡಲು ಸಜ್ಜಾಗಿದೆ ಮತ್ತು ಒಂದೆ ಕಡೆಯಿಂದ ಅದು ಬರುವದಿಲ್ಲ ಸುತ್ತಲೂ ಮುತ್ತಿದೆ. ಕೇವಲ ಭೂಮಿ ಮೇಲಿಂದ ಅಲ್ಲ, ಇಲ್ಲಿನ ಎಂಟು ದಿಕ್ಕು ಮತ್ತು ನೆಲ, ಆಗಸ ಹೀಗೆ ದಶದಿಕ್ಕು ಗಳಿಂದಲೂ ಕತ್ತಲು ಹಬ್ಬಲು ಹೊಂಚು ಹಾಕಿದೆ. ಆದರೆ ಅದನ್ನು ಗೆಲ್ಲುವ ತಂತ್ರ ನಮ್ಮ ಕೈಲೆ ಇದೆ. ಬರೀ ಕತ್ತಲೆಯ ಮಾತು ಆಡುತ್ತ ಕೂಡ್ರದೆ, ಬೆಳಕಿನ ದಾರಿ ಹುಡುಕಬೇಕಿದೆ. ಆ ಕೆಲಸ ಕಾವ್ಯದ್ದು ಅದನ್ನು ಕಾವ್ಯ ಮಾಡಬೇಕು. ಅದಕ್ಕೆ ಕವಿ ಜ್ಞಾನದ ಮಧುವ ಕುಡಿಯುತ್ತ ಇರುಳಗರ್ಭದಲಿ ಅಡಗಿರಬಹುದಾದ ಬೆಳಕನ್ನು ಚಿಗುರಿಸುತ್ತ ಕುಡಿಯಿರಿ ಎನ್ನುತ್ತಾನೆ. ಇಲ್ಲಿ ಮುಖ್ಯ ಆಶಯವೇ ಬೆಳಕ ಚಿಗುರಿಸು ವದು.
ಜ್ಞಾನ ಎಲ್ಲಿಂದಲಾದರೂ ಬರಲಿ ಅದನ್ನು ನಮ್ಮದಾಸಿ ಕೊಳ್ಳಬೇಕು. ಅದು ಕೇವಲ ಪೂರ್ವದಲ್ಲೂ ಇಲ್ಲ ಪಶ್ಚಿಮದಲ್ಲೂ ಇಲ್ಲ ಎಲ್ಲ ಕಡೆಗೂ ಇದೆ. ಆದ್ದರಿಂದ ಇಡೀ ವಿಶ್ವವೇ ಒಂದು ದ್ರಾಕ್ಷಾ ತೋಟದಂತಿದೆ ಮಲಗಿರುವ ಮನಗಳನ್ನು ಎಬ್ಬಿಸುವ ಕಾರ್ಯ ಆಗಬೇಕಿದೆ. ಮಲಗಿದವರನ್ನು ಎಚ್ಚರಿಸದೇ ಹೋದರೆ ಅವರು ಅಲ್ಲಿಯೇ ಉಳಿಯುತ್ತಾರೆ. ಅವರಲ್ಲಿ ಅರಿವಿನ ಘಮಲು ತುಂಬಬೇಕಿದೆ.
ಕಡೆಯ ಷೇರ್ ಸರಸ ಜನನ ವಿರಸ ಮರಣ ಸಮರಸವೇ ಜೀವನ ಎಂಬ ವರಕವಿ ಯ ಸಾಲು ನೆನಪಿಸುತ್ತದೆ. ಜೀವನದಲ್ಲಿ ರಸ ವಿರಸ ಎರಡೂ ಇದೆ .ಅದು ಸಮರಸದ ಸೋಮರಸ ಮಾಡಿಕೊಂಡು ಕುಡಿಯುವದು ಮುಖ್ಯ ಎನ್ನುತ್ತಾರೆ. ಕವಿಯ ಗಮನ ಸಮರಸದ ಕಡೆಗಿದೆ. ಸರಸ ವಿರಸ ಎರಡೂ ಇರುತ್ತವೆ ಅವನ್ನು ಸಮರಸಗೊಳಿಸುವದೆ ಬದುಕು ಎನ್ನುವ ಗಜಲ್ ಸಮಾನತೆ- ಸಮರಸ ಗಳನ್ನು ಸಾರಿದೆ.
ಇರುವ ಗರ್ಭದಲ್ಲಿ ಬೆಳಕು ಚಿಗುರಿಸುವದು, ವಿಶ್ವತೋಟದ ದ್ರಾಕ್ಷಾರಸ, ಅರಿವಿನ ಘಮಲು,ಸಮರಸದ ಸೋಮರಸ ಇಂತಹ ವಿನೂತನ ರೂಪಕ ಮತ್ತು ನುಡಿಗಟ್ಟುಗಳನ್ನು ಅಮರಚಿಂತರು ಸೃಷ್ಟಿಸುತ್ತಾರೆ.
ಜ್ಞಾನದ ಸಮನಾದ ಹಂಚಿಕೆಯ ತತ್ವವನ್ನು ಸಾರುವ ಗಜಲ್ ನಿಜಕ್ಕೂ ಅಮರಚಿಂತರ ಬಂಡಾಯ ಮನೋಧರ್ಮದ ಪ್ರತೀಕವಾಗಿದೆ. ಅವರಿಗೆ ಕಾವ್ಯ ಗಜಲ್, ಚುಟುಕು, ರುಬಾಯಿ ಯಾವುದೇ ಕಾವ್ಯ ಪ್ರಕಾರ ಇರಲಿ, ಅದು ಸಾಮಾಜಿಕ ಸಮಾನತೆಯನ್ನು ತರುವ ಸಂದೇಶವನ್ನೇ ಸಾರಲು ಬಳಸಬೇಕಾಗಿದ್ದಿತು. ಹೀಗಾಗಿ ಇಲ್ಲಿ ಗಜಲ್ ಕೂಡ ಅಂಥದೇ ಆಶಯ ಹೊಂದಿದೆ. ಇಂತಹ ಅಪರೂಪದ ಗಜಲ್ನ್ನು ಆಯ್ದುಕೊಂಡಿರುವ ಸಂಪಾದಕರಾದ ಶ್ರೀ ಮಹಿಪಾಲರೆಡ್ಡಿ ಮುನ್ನೂರ್ ಅವರ ಪ್ರಗತಿಪರ ಮನೋಭಾವಕ್ಕೆ ಶರಣು ಹೇಳಬೇಕಿದೆ.
ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ
ಮೊ. 9731970857
- * * * -