ಜನ ವಿರೋಧಿ ಕೃಷಿ ನೀತಿ ರದ್ದುಗೊಳಿಸಿ: ಆರ್.ಎಸ್.ಬಸವರಾಜ
ಹಗರಿಬೊಮ್ಮನಹಳ್ಳಿ 10: ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳುವಳಿ ನೆನಪಿನಲ್ಲಿ ದೇಶದ ಕಾರ್ಮಿಕರ, ರೈತರ, ಕೃಷಿಕೂಲಿಕಾರರು ಒಗ್ಗೂಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜೊತೆಗೆ ಜನ ವಿರೋಧಿ ಕೃಷಿ ಕಾನೂನುಗಳನ್ನು ರದ್ದು ಪಡಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೊಳಿಸಬಾರದು. ಋಣಮುಕ್ತ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು. ಬಡವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗೆ ಸಾಗುವಳಿ ಚೀಟೀನೀಡಿ ಸಕ್ರಮಗೊಳಿಸಬೇಕು. ನಿವೇಶನ ರಹಿತರಿಗೆ ನಿವೇಶನ ಜೊತೆಗೆ ವಸತಿ ಹಂಚಿಕೆ ಮಾಡಲು ಸಮಗ್ರ ಯೋಜನೆ ಘೋಷಣೆ ಮಾಡಬೇಕು. ರಾಜ್ಯದ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯಾ ಕಾಯಿದೆಗಳ ಜನವಿರೋಧಿ ತಿದ್ದುಪಡಿಯನ್ನು ರಾಜ್ಯ ಸರಕಾರ ವಾಪಾಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಎಸ್.ಜಗನ್ನಾಥ ಮಾತನಾಡಿ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಖಾದ್ಯ ತೈಲ ಇತ್ಯಾದಿ ಎಲ್ಲಾ ಅಗತ್ಯ ಸರಕುಗಳ ಬೆಲೆಯಲ್ಲಿ ಆಗಿರುವ ತೀವ್ರ ಏರಿಕೆಯನ್ನು ನಿವಾರಿಸಬೇಕು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಿ, ದಿನಕ್ಕೆ 600ಕೂಲಿ ನಿಗದಿಪಡಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರುವ ಎಲ್ಲಾ ಕುಟುಂಬಗಳಿಗೆ 10ಸಾವಿರ ಪ್ರೋತ್ಸಾಹ ಧನ ನೀಡಬೇಕು. ಕೋರೋನಾ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿ ಎಲ್ಲರಿಗೂ ಲಸಿಕೆ ಸಿಗುವಂತೆ ಕ್ರಮವಿಸಬೇಕು. ಕೋರೋನಾ ಅವಧಿ ಇರುವವರೆಗೂ ತಿಂಗಳಿಗೆ ಪ್ರತಿ ವ್ಯಕ್ತಿಗೆ 10ಕೆಜಿ ಉಚಿತ ಆಹಾರ ಧಾನ್ಯ ಒದಗಿಸಬೇಕು. ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಮಾಡುವುದು ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೂ ಮೀಟರ್ ಅಳವಡಿಕೆ ಮಾಡಕೂಡದು ಎಂದು ಆಗ್ರಹಿಸಿದರು.
ದೇವದಾಸಿ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು ಕನಿಷ್ಠ 3ಸಾವಿರ ರೂಗಳಿಗೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರಿಗೆ ನೀಡಬೇಕಾದ ಬಾಕಿ ಮಾಸಿಕ ಸಹಾಯಧನವನ್ನು ಹಾಗೂ ಮೂರು ತಿಂಗಳ ಮುಂಗಡ ಮಾಸಿಕ ಸಹಾಯಧನವನ್ನು ಒಟ್ಟಿಗೆ ಕೂಡಲೇ ನೀಡಬೇಕು. ಪಟ್ಟಿಯಲ್ಲಿಲ್ಲದ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಗೆ ಸೇರಿಸಿ ಸರಕಾರದ ಸೌಲಭ್ಯ ನೀಡಬೇಕು. ದೇವದಾಸಿ ಮಹಿಳೆಯರ ಮಕ್ಕಳ ನಡುವಿನ ವಿವಾಹಕ್ಕೆ ಯಾವುದೇ ಷರತ್ತನ್ನು ವಿಧಿಸದೇ ಇಬ್ಬರಿಗೂ ಪ್ರೋತ್ಸಾಹ ಧನ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತರೈತ ಸಂಘದ ಕೊಟಿಗಿ ಮಲ್ಲಿಕಾರ್ಜುನ, ರಂಗಪ್ಪ ದಾಸರ್, ಎಐಟಿಯುಸಿ ತಾಲೂಕು ಸಂಚಾಲಕ ಎಸ್.ಅನ್ವರ್ಬಾಷ, ರೈತ ಸಂಘದ ಹತ್ತಿ ಅಡಿವೆಪ್ಪ. ಜೆಎಂಎಸ್ನ ಸರ್ಧಾರ್ ಹುಲಿಗೆಮ್ಮ, ಸಮುದಾಯ ಸಂಘಟನೆಯ ಬಸವರಾಜ ಕಮ್ಮಾರ್ ಮಾತನಾಡಿದರು. ವಿವಿಧ ಸಂಘಟನೆಗಳ ಚಾಂದ್ಭೀ, ಮೈಲಮ್ಮ, ಹನುಮಕ್ಕ, ತಟ್ನೆಮ್ಮ, ಜ್ಯೋತಿ, ಅಂಜಿನಮ್ಮ, ಗೋವಿಂದ, ಅಂಜಿನಪ್ಪ ಇತರರಿದ್ದರು.