‘ಅಮೃತಮತಿ’ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ
ಬೆಂಗಳೂರು, ಜ 28 :ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಚಿತ್ರಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ 'ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿದೆ. ಅಮೃತಮತಿ ಈಗಾಗಲೇ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನಚಿತ್ರೋತ್ಸವದಲ್ಲಿ ಅಮೃತಮತಿ ಪಾತ್ರಧಾರಿ ಹರಿಪ್ರಿಯ ಶ್ರೇಷ್ಠನಟಿ ಪ್ರಶಸ್ತಿಗೆ ಭಾಜನರಾಗಿದ್ದರು .ಹದಿಮೂರನೇ ಶತಮಾನದ ಜನ್ನ ಕವಿಯ ‘ಯಶೋಧರ ಚರಿತೆ’ ಆಧರಿತ ಅಮೃತಮತಿ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ಯಶೋಧರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಸೇರಿದಂತೆ ಅನೇಕರು ಬಣ್ಣಹಚ್ಚಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮಾರ್ಚ್ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮುಂಬೈ ಮೂಲದ ಸಿಎಆರ್ ಯು ಎಂಟರ್ ಪ್ರೈಸಸ್ ಸಂಸ್ಥೆ ಈಚಿತ್ರದ ಪ್ರದರ್ಶನದ ಹಕ್ಕು ಪಡೆದಿದೆ. ಚಿತ್ರಮಂದಿರ ಮಾತ್ರವಲ್ಲದೆ ಈ ಸಿನಿಮಾ ಒಟಿಟಿಯಲ್ಲೂ ರಿಲೀಸ್ ಆಗುವ ಸಾಧ್ಯತೆ ಇದೆ.