ನಟ ಯಶ್ ಜಮೀನು ವಿವಾದ ಅಂತ್ಯ
ಬೆಂಗಳೂರು/ಹಾಸನ, ಮಾರ್ಚ್ 17 :ಹಾಸನ ಜಿಲ್ಲೆಯ ತಿಮ್ಲಾಪುರದಲ್ಲಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದ ಫಾರ್ಮ್ ಹೌಸ್ ಗೆ ರಸ್ತೆ ನಿರ್ಮಿಸುವ ಕುರಿತಾಗಿ ಎದ್ದಿದ್ದ ವಿವಾದ ಸುಖಾಂತ್ಯಗೊಂಡಿದೆ.ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರದಲ್ಲಿ ಗ್ರಾಮಸ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಯಶ್ ತಂದೆ-ತಾಯಿ ಹಾಗೂ ಅವರ ಬೆಂಬಲಿಗರ ನಡುವೆ ಕೆಲವು ದಿನಗಳ ಹಿಂದೆ ವಾಗ್ವಾದವಾಗಿತ್ತು. ಈ ಸಂಬಂಧ ಯಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಗ್ರಾಮದ ದೇವಾಲಯದಲ್ಲಿ ನಡೆದ ರಾಜೀ ಪಂಚಾಯ್ತಿಯಲ್ಲಿ ಎಲ್ಲವನ್ನೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗಿದೆ. ಯಶ್ ಇಲ್ಲಿ ಜಮೀನು ಖರೀದಿಸಿರುವುದು ನಮಗೆ ಹೆಮ್ಮೆಯ ವಿಚಾರ. ಸಂವಹನದ ಕೊರತೆಯಿಂದ ಇಷ್ಟೆಲ್ಲಾ ರದ್ದಾಂತವಾಗಿದೆ. ರಸ್ತೆ ನಿರ್ಮಾಣಕ್ಕೆ ಜಮೀನು ಕೊಟ್ಟು ಬಿಡಲು ಸಿದ್ಧ ಎಂದು ಗ್ರಾಮದ ಮುಖಂಡರು ಒಪ್ಪಿಗೆ ನೀಡಿದ್ದಾರೆ.
ಇನ್ನು, ಯಶ್ ಕೂಡಾ ರೈತರಿಗೆ ಅನುಕೂಲವಾಗುತ್ತದೆ ಎಂದಾದರೆ 10 ಎಕರೆ ಜಮೀನು ಕೊಡಲೂ ಸಿದ್ಧ ಎಂದಿದ್ದರು. ಅದರಂತೆ ಎಲ್ಲವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ.ತಿಮ್ಲಾಪುರ ಗ್ರಾಮದಲ್ಲಿ ಎರಡು ವರ್ಷದ ಹಿಂದೆ 80 ಎಕರೆ ಜಮೀನನ್ನು ಯಶ್ ಖರೀದಿಸಿದ್ದರು. ಇತ್ತೀಚೆಗೆ ಜಮೀನು, ತೋಟಕ್ಕೆ ಹೋಗಿಬರಲು ಅನುಕೂಲವಾಗುವಂತೆ ಜೆಸಿಬಿಯಲ್ಲಿ ರಸ್ತೆ ಮಾಡಲು ಮುಂದಾಗಿದ್ದರು, ಆ ವೇಳೆ ಅಕ್ಕ ಪಕ್ಕದ ಜಮೀನು ಮಾಲೀಕರು ಕ್ಯಾತೆ ತೆಗೆದಿದ್ದಾರೆ. ಈ ವಿಷಯವಾಗಿ ಯಶ್ ಅವರ ತಾಯಿ ಪುಷ್ಫಾ, ತಂದೆ ಅರುಣ್ ಕುಮಾರ್, ಸಂಬಂಧಿಕ ಯುವಕರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿತ್ತು. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಮೇಲೆ ಈ ಪ್ರಕರಣ ಹಾಸನದ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.ತಮ್ಮಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಜಮೀನಿನಲ್ಲಿ ರಾತ್ರಿಯ ವೇಳೆ ದುಷ್ಕರ್ಮಿಗಳು ಹಾವಳಿ ಮಾಡುತ್ತಿದ್ದಾರೆ. ಹೀಗಾಗಿ ಜಮೀನಿಗೆ ಗೋಡೆ ನಿರ್ಮಿಸುತ್ತಿದ್ದೇವೆ. ಅಂತೆಯೇ ಸಂಚಾರಕ್ಕೆ ಅನುಕೂಲವಾಗಲು ರಸ್ತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಯಶ್ ತಿಳಿಸಿದ್ದರು.