ಎರಡೂ ಕ್ಷೇತ್ರದಲ್ಲಿ 25 ಸಾವಿರಗಳ ಮತಗಳ ಅಂತರದ ಗೆಲುವು: ಡಿಕೆಶಿ
ಸಿಂದಗಿ, ಅ 8: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ . ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಸಿಂದಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಇಂದಿನಿಂದ ಆರಂಭವಾಗಿದೆ. ನಾವೆಲ್ಲ ಸೇರಿ ಮನಗೂಳಿ ಅವರ ಪುತ್ರನಿಗೆ ಟಿಕೆಟ್ ನೀಡಿದ್ದೇವೆ. ಮನಗೂಳಿ ಅವರು ಕೊನೆಯುಸಿರು ಎಳೆಯುವುದಕ್ಕೂ 15 ದಿನಗಳ ಮುನ್ನ ನನ್ನನ್ನು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನನ್ನ ಮಗನನ್ನು ನಿಮ್ಮ ಕೈಗಿಡುತ್ತಿದ್ದೇನೆ ಎಂದು ಹೇಳಿದ್ದರು ಅವರಿಗೆ ಕೊಟ್ಟ ಮಾತಿನಂತೆ ಒಮ್ಮತದಿಂದ ಅಶೋಕ್ ಮನಗೂಳಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.
ಈ ಚುನಾವಣೆ ರಾಜ್ಯ ಸರ್ಕಾರದ ವೈಫಲ್ಯ ಕೋವಿಡ್ ಸಮಯದಲ್ಲಿ ಬಿಜೆಪಿ ಆಡಳಿತದಿಂದ ಜನರು ಅನುಭವಿಸುತ್ತಿರುವ ನೋವನ್ನು ಹೇಳಿಕೊಳ್ಳಲು ಒಂದು ಅವಕಾಶವಾಗಿದೆ. ಸರ್ಕಾರ ಯಾವ ವರ್ಗಕ್ಕೂ ಅನುಕೂಲ ಮಾಡಿಕೊಡಲಿಲ್ಲ ಎಂದರು. ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಜನರ ಮೇಲೆ ಕಾಂಗ್ರೆಸ್ ವಿಶ್ವಾಸ ಇಟ್ಟಿದ್ದು, ಅವರ ಭಾವನೆ, ನೋವು, ಅವರಿಗಾದ ಅನ್ಯಾಯ, ಆಕ್ರೋಶ ವ್ಯಕ್ತಪಡಿಸಲು ಇದೊಂದು ಉತ್ತಮ ಅವಕಾಶ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಮಾಜದ ಎಲ್ಲ ವರ್ಗದ ಜನರು ಒಪ್ಪಿಕೊಂಡಿದ್ದು 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಎರಡೂ ಕಡೆ ಗೆಲುವು ದೊರಕಲಿದೆ ಎಂಬ ವಿಶ್ವಾಸವಿದೆ ಎಂದು ಶಿವಕುಮಾರ್ ಹೇಳಿದರು.