ಭಾರಿ ಮಳೆ-ಗಾಳಿಗೆ ಉರುಳಿ ಬಿದ್ದ ಮರ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನಲ್ಲಿ ಗುರುವಾರ ಸುರಿದ ಭಾರಿ ಮಳೆ-ಗಾಳಿಗೆ ಶಿಂಗನಳ್ಳಿ ಗ್ರಾಮದ ಹತ್ತಿರ ರಸ್ತೆ ಮೇಲೆ ಮರವೊಂದು ಉರುಳಿ ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಹುಬ್ಬಳ್ಳಿ-ಶಿರಸಿ ರಾಜ್ಯ ಹೆದ್ದಾರಿಯ ಶಿಂಗನಳ್ಳಿ ಬಳಿಯ ರಸ್ತೆ ಪಕ್ಕದ ಬೃಹತ್ ಮರವೊಂದು ಮಳೆ-ಗಾಳಿಗೆ ರಸ್ತೆ ಮೇಲೆ ಅಡ್ಡಲಾಗಿ ಉರುಳಿ ಬಿದ್ದು ರಸ್ತೆ ಮೇಲೆಲ್ಲಾ ಮರದ ದೊಡ್ಡ-ದೊಡ್ಡ ಟೊಂಗೆಗಳು ಬಿದ್ದಿದ್ದವು. ಇದರಿಂದ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಶಿರಸಿಯಿಂದ ಪಟ್ಟಣದ ಕಡೆಗೆ ಮತ್ತು ಪಟ್ಟಣದಿಂದ ಶಿರಸಿ ಕಡೆಗೆ ಹೊರಟಿದ್ದ ವಾಹನಗಳು ಸಂಚರಿಸಲು ಆಗದೆ ಸಾಲುಗಟ್ಟಿ ನಿಂತಿದ್ದವು. ನಂತರ ಬಂದ ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರದ ಟೊಂಗೆಗಳನ್ನು ಕಡಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೃಷ್ಟವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ.