ಮಳೆಗಾಗಿ ಮುಸ್ಲೀಂರಿಂದ ಕಣ್ಣೀರ ಪ್ರಾರ್ಥನೆ
ತಾಳಿಕೋಟಿ 30: ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ರೈತ ಬಾಂಧವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಮಳೆಬಾರದೇ ಹೋದರೆ ಇಡೀ ಜನ ಜೀವನವೇ ಅಸ್ತವ್ಯಸ್ಥವಾಗಲಿದೆ ಹೀಗಾಗದಂತೆ ಮಾಡಲು ಮಳೆ ಕರುಣಿಸು ಅಲ್ಲಾಹ ಎಂದು ಮುಸ್ಲೀಂ ಬಾಂಧವರು ಕಣ್ಣೀರ ಪ್ರಾರ್ಥನೆ ಸಲ್ಲಿಸಿದರು.
ಶುಕ್ರವಾರ ಪಟ್ಟಣದ ಅಂಜುಮನ್ ಕಾಲೇಜ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲೀಂ ಬಾಂಧವರು ಮಳೆಯ ಆಗಮನಕ್ಕಾಗಿ ಅಲ್ಲಾಹುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಪ್ರಾರ್ಥನೆಯ ನೇತೃತ್ವವಹಿಸಿದ ಮೌಲಾಸಾ ಮುಜೀಬುರಹ್ಮಾನ್ ಉಮರಿ ಅವರು ಪ್ರವಚನ ನೀಡಿ ಪ್ರವಾದಿ ಮಹಮ್ಮದರು ಮಳೆ ಆಗದಿರುವ ಸಂದರ್ಭದಲ್ಲಿ ಮುಸ್ಲೀಂರು ಪಟ್ಟಣದ ಹೊರಗಡೆ ಬಯಲು ಪ್ರದೇಶದಲ್ಲಿ ಸೇರಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ತಿಳಿಸಿದ್ದಾರೆ. ಮಳೆ ದೇವನ ಅತ್ಯಮೂಲ್ಯ ಅನುಗ್ರಹವಾಗಿದೆ, ಸಮಾಜದಲ್ಲಿ ಕೆಡುಕುಗಳು ಹೆಚ್ಚಾದಾಗ ದೇವನು ತನ್ನ ಈ ಅನುಗ್ರಹ ತಡೆಹಿಡಿಯುತ್ತಾನೆ, ನಿಷ್ಕಳಂಕ ಮನಸ್ಸಿನಿಂದ ಪ್ರಾರ್ಥಿಸಿದರೆ ನಿಸ್ಸಂದೇಹವಾಗಿಯೂ ಅಲ್ಲಾಹ ಮಳೆ ಸುರಿಸುತ್ತಾನೆ ಎಂದು ತಿಳಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಗಣ್ಯರಾದ ಸೈಯದ್ ಫಸಿಯುದ್ದಿನ ಖಾಜಿ, ಜನಾಬ ಅಬ್ದುಲ್ ರಜಾಕ್ಸಾಬ್ ನಾಲತವಾಡ. ರೋಶನ್ ಡೋಣಿ, ಮುರ್ತುಜಾಸಾಬ್ ಮೇತ್ರಿ, ಮೋದಿನಸಾಬ್ ನಗಾರ್ಚಿ, ಮಹಿಬೂಬ ಕೆಂಭಾವಿ, ಫಯಾಜ ಖಾಜಿ, ಶಬ್ಬೀರ ನಮಾಜಕಟ್ಟಿ, ಡಾ. ಮೀರಾಸಾ ಮಕಾನದಾರ, ಆಬೀದ ದಖನಿ, ತನ್ವೀರ ಮನಗೂಳಿ, ಕಾಸೀಮ ಅಲಿ ಮನ್ಸೂರ, ಗೌಸ ನಮಾಜಕಟ್ಟಿ, ಮತ್ತಿತರರು ಇದ್ದರು