ಮನರಂಜನೆ

ಸರಳ, ಸುಂದರ, ಚಂದನವನದ ಚಿರಯುವಕ. . .

ಸರಳ, ಸುಂದರ, ಚಂದನವನದ ಚಿರಯುವಕ. . .

 ಬೆಂಗಳೂರು, ಸೆ.04  ‘ನಾವೆಲ್ಲರೂ ಒಂದೇ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ’, ‘ಪಾತ್ರವೇ ನಾವಾಗಿ ಅಭಿನಯಿಸುತ್ತೇವಾದರೂ ನಾವೇ ಬೇರೆ, ಪಾತ್ರವೇ ಬೇರೆ’  . . . .ಹೀಗೆ ಅರ್ಥಗರ್ಭಿತವಾಗಿ ಮಾತನಾಡುವ ಬುದ್ಧಿವಂತ ನಟ ಅನಂತನಾಗ್.
 
ವಯಸ್ಸು 74.  ಆದರೇನು?  ಕುಗ್ಗದ ಉತ್ಸಾಹ.  ಅತ್ಯಂತ ಸರಳ, ಸುಂದರ, ಚಂದನವನದ ಚಿರಯುವಕ ಎಂದೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಅನಂತ್ ಸದಾ ಸಕ್ರಿಯ.  
 
ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರದ ವಿಚಾರಗಳನ್ನು ನಿರರ್ಗಳವಾಗಿ ಮಾತನಾಡುವ, ವಿಮರ್ಶಿಸುವ ಅನಂತ್, ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ದೈತ್ಯ ಪ್ರತಿಭೆಯ ನಟ.  
 
ಈ ನಟನ ಜನ್ಮದಿನಕ್ಕೆ ಇಂದು ಅಭಿಮಾನಿಗಳು, ನಟ, ನಟಿಯರಿಂದ ಶುಭಾಶಯದ ಸುರಿಮಳೆಯಾಗಿದೆ.
 
ಎಲ್ಲೋ ಅಂಕುರಿಸಿ ರಾಘ್ಯಾನಿಗೆ, ಹಲವು ಗಣೇಶಂದಿರಿಗೆ, ಲಂಬೂ ಡಿಯರ್'ಗೆ, ರಾಧಾಕೃಷ್ಣನಿಗೆ, ಭೈರವೀ  ಕಟಸುಬ್ಬಯ್ಯನವರಿಗೆ, ದೂರದ ಮಲಯಾಳದ ಸ್ವಾತಿ ತಿರುನಾಳರಿಗೆ ಜೀವ ತುಂಬಿ, ಇಂದಿಗೂ ಧರ್ಮ-ದೇಶಕ್ಕೆ ನಿಷ್ಠೆಯಿಂದಿರುವ ದೈತ್ಯ ಪ್ರತಿಭೆ.   ಕನ್ನಡ ಭಾಷೆಗೆ ಹೆಮ್ಮೆ ತರುವಂತಹ ನಟ ಎಂದೆಲ್ಲ ಶ್ಲಾಘಿಸಿ ಹಾರೈಸಿದ್ದಾರೆ.
 
ಕೊಂಚ ಅಂತರ್ಮುಖಿ, ಮೂಡಿ ಎಂದೆಲ್ಲ ಅನಿಸಿದರೂ, ಹತ್ತಿರವಾಗುತ್ತಿದ್ದಂತೆ ಅವರದ್ದು ಮಗುವಿನಂತಹ ಮನಸ್ಸು, ಬೇಡದ ವಿಚಾರಗಳಿಂದ ದೂರವಿರುವ ಸ್ವಭಾವ ಎಂಬುದು ಖಚಿತವಾಗುತ್ತದೆ.  
 
ಇಂತಹ ಮೇರು ನಟನಿಗೆ ಪದ್ಮ ಪುರಸ್ಕಾರ ನೀಡಬೇಕೆಂಬ ಕೂಗು ಕೇಳಿಬಂದಿರುವುದರಲ್ಲಿ ಅಚ್ಚರಿಯೇನೂ ಇಲ್ಲ.  ಅನಂತ್ ನಿಮ್ಮ ಕಲಾ ಪಯಣ ಹೀಗೆಯೇ ಮುಂದುವರಿಯಲಿ ಎಂಬುದಷ್ಟೇ ಚಿತ್ರರಸಿಕರ ಆಶಯ.

ಸುದ್ದಿ ಓದಿ