ನನ್ನ ಬದುಕು ಪಠ್ಯವಾದರೆ ಸಾಲದು ಜನಪದ ಕಲೆಗಳಿಗೆ ಹೆಚ್ಚು ಒತ್ತು ನೀಡಿ: ಮಂಜಮ್ಮ ಜೋಗತಿ
ಬಳ್ಳಾರಿ 23: ನನ್ನ ತಂದೆಗೆ 21 ಜನ ಮಕ್ಕಳು ನಾನು ಎಷ್ಟನೇ ಯಾವನು ಗೊತ್ತಿಲ್ಲ. ಆದರೆ ನಂತರದ ದಿನಗಳಲ್ಲಿ ದೈಹಿಕ, ಮನೋ ಆಶಯಗಳ ಬದಲಾಯಿತು. ಎಸ್.ಎಸ್.ಎಲ್.ಸಿ. ಫೇಲಾದ ನಾನು ಕಲೆಯನ್ನು ನಂಬಿದೆ. ಇದರಿಂದಾಗಿ ನನ್ನ ವ್ಯಕ್ತಿತ್ವ ಬೆಳೆಯಿತು. ಈಗ ನನ್ನ ಬದುಕೇ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆಂದರು. ಯಾವುದಕ್ಕೂ ಭಕ್ತಿ ಶ್ರದ್ಧೆ ಮುಖ್ಯ ಎಂದು ಅವರು. ತಪ್ಪುಮಾಡಿದ ನನ್ನ ಗುರು ಕಾಳವ್ವ ಜೋಗತಿಗೆ ಕಪಾಳ ಮೋಕ್ಷ ಮಾಡುವಂತಹ ಪರಿಸ್ಥಿತಿ ಎದುರಿಸಿದೆ. ಅನೇಕರು ನನಗೆ ಮೋಸ ಮಾಡಿದರು. ಆದರೂ ಕೊನೆಗೂ ಕಾಳಮ್ಮ ಜೋಗತಿ ಅವರೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದರು. ಅದಕ್ಕಾಗಿ ಏನೇ ಆಗಲಿ ಗುರು ಹಿರಿಯರನ್ನು ನಾವು ಮರೆಯಬಾರದು ಎಂದರು. ನನ್ನಂತಹವರನ್ನು ನೋಡಿದ ಮೇಲೆ ತೃತೀಯ ಲಿಂಗಿಗಳ ಬಗ್ಗೆ ಗೌರವ ಹೆಚ್ಚುತ್ತದೆ. ನನ್ನ ವಿಷಯ ಪಠ್ಯ ಆದರೆ ಸಾಲದು. ಜನಪದ ಕಲೆಗಳ ಬಗ್ಗೆ ಪಠ್ಯದಲ್ಲಿ ಹೆಚ್ಚಿನ ಒತ್ತುಕೊಡಬೇಕಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಹಂದ್ಯಾಳಿನ ಮಹಾದೇವ ತಾತ ಕಲಾ ಸಂಘ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಅವರಿಗೆ ಸನ್ಮಾನ ಮತ್ತು ರಂಗಭೂಮಿಗೆ ಮಹಿಳೆಯರ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಉಪನ್ಯಾಸಕ ಡಾ.ಯು.ಶ್ರೀನಿವಾಸಮೂರ್ತಿ ಅವರು ಕಾರ್ಯಕ್ರಮದ ಆಶಯ ನುಡಿಗಳನ್ನಾಡುತ್ತ. ಮಂಜಮ್ಮ ಜೋಗತಿ ಅವರ ಕುರಿತು ನೀವು ಮುಂದಿನ ದಿನಗಳಲ್ಲಿ ಪಠ್ಯವಾಗಿ ಓದುವ ಸಂದರ್ಭ ಬರಬಹುದು. ಮಹಿಳೆಯರಿಗೆ ಶಿಕ್ಷಣ ಮಹತ್ವದ ಬಗ್ಗೆ ತಿಳಿಸಿ. ಲಿಂಗತಾರತಮ್ಯ ಹೋಗಲಾಡಿಸುವುದು ಸಹ ಮುಖ್ಯ ಎಂದರು.
ಅಥಿತಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ ಅವರು. ರಂಗಭೂಮಿ ಮತ್ತು ಜನಪದದ ಜೋಗತಿ ಕಲೆ ಪ್ರಕಾರದಲ್ಲಿ ಅಪರೂಪದ ವ್ಯಕ್ತಿತ್ವದ ಮಂಜಮ್ಮ ಜೋಗತಿ ಅವರ ಬಗ್ಗೆ ಕೃತಿ ಪ್ರಕಟಗೊಂಡಿದೆ. ಅದನ್ನು ಓದಿ ಅಂತಹವರೊಂದಿಗೆ ನಿಮ್ಮಒಂದು ದಿನದ ಸಮಯ ಸದಾ ಸ್ಮರಣೀಯವಾಗಲಿ ಎಂದರು. ರಂಗಭೂಮಿಗೆ ಮಹಿಳೆಯರ ಕೊಡುಗೆ ಕುರಿತು ಉಪನ್ಯಾಸಕಿ ಡಾ. ಎ. ಎನ್. ಸಿದ್ದೇಶ್ವರಿ ಮಾತನಾಡಿದರು. ರಂಗಭೂಮಿ ಕಲಾವಿದ ಆದೋನಿ ವೀಣಾ ಕುಮಾರಿ, ಉಮಾರಾಣಿ ಇಳಕಲ್ , ಉಪನ್ಯಾಸಕಿ ಸುಜಾತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರು ವೇದಿಕೆಯಲ್ಲಿದ್ದರು. ಉಪನ್ಯಾಸಕ ಶಾಮಣ್ಣ ಅವರು ಅಧ್ಯಕ್ಷತೆವಹಿಸಿದ್ದರು.ಉಪನ್ಯಾಸಕ ಚಾಂದಭಾಶಾ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿನಿ ಬಸಮ್ಮ ಪ್ರಾರ್ಥನೆ ಮಾಡಿದರು.