ನಮ್ಮೊಳಗಿನ ಮೌನೇಶನನ್ನು ಛೇಡಿಸುವ ಎಮ್.ಆರ್. ಕಮಲಾ ಅವರ ಕವಿತೆ
ಮೊನ್ನೆ ಹಿರಿಯ ಕವಿಯತ್ರಿ ಎಂ.ಆರ್ ಕಮಲಾ ಅವರ ಜನ್ಮದಿನವೆಂದು ಓದಿದ್ದೆ. ಈಗಾಗಲೇ ನಾಲ್ಕು ಕವನ ಸಂಕಲನ ಹತ್ತಾರು ಅನುವಾದ ಸಂಕಲನಗಳನ್ನು ತಂದಿರುವ ಎಂ.ಆರ್ ಕಮಲಾ ಮೆಡಮ್ ಅವರು ಕನ್ನಡದ ಪ್ರಮುಖ ಕವಯಿತ್ರಿ. ಆಧುನಿಕ ಬದುಕಿನ ತಲ್ಲಣಗಳನ್ನು ಕವಿತೆಗೆ ವಸ್ತು ವಾಗಿ ಹೊಂದಿರುವ ಅವರ ಕವಿತೆಗಳು ಹೊಸತನದಿಂದ ವಿಶಿಷ್ಟವಾಗಿರುತ್ತವೆ. ತೀರ ಇತ್ತೀಚಿನ ಕವನ ಸಂಕಲನ "ಮಾರಿಬಿಡಿ"
(ಇದು ಅವರ ನಾಲ್ಕನೆಯ ಕವನ ಸಂಕಲನ)
ಅವರ ‘ಮಾರಿಬಿಡಿ’ ಕವಿತಾ ಸಂಕಲನದಲ್ಲಿನ ಒಂದು ಕವಿತೆ ತುಂಬ ಆಸಕ್ತಿದಾಯಕವಾಗಿದೆ. ಸಮಕಾಲೀನ ಬದುಕಿನ ಬಹು ಮುಖ್ಯ ಸಮಸ್ಯೆಯನ್ನು ಕುರಿತು ಮಾತಾಡುತ್ತದೆ.
ಅದು ಮೊಬೈಲ್ ಮತ್ತು ನಾವು ಎಂಬ ವಿಷಯದ ಕುರಿತ ಕವಿತೆ. ಹೆಸರು ಹೇಳುವಂತೆ ಇದು ಈ ಕಾಲದ ತಲ್ಲಣಗಳನ್ನು ಬಿತ್ತರಿಸುವ ಕಾವ್ಯ. ಅದರಲ್ಲೂ ಆಧುನಿಕತೆಗೆ, ಅದು ತಂದೊದಗಿಸಿರುವ ವೈಜ್ಞಾನಿಕ ಅನುಕೂಲಗಳಿಗೆ ನಾವು ತೆರೆದುಕೊಂಡಿರುವ ಪರಿ ಸಂಕಲನದ ತುಂಬ ತುಂಬಿದೆ. ಈಚೆಗೆ ಮೊಬೈಲ್ ಎಂಬ ಮಾಯಾಜಾಲ ಬಂದ ಮೇಲೆ ಮಾರುವ ಮತ್ತು ಕೊಳ್ಳುವ ಜಾಯಮಾನವೇ ಆರಂಭವಾಗಿದೆ. ಕೊನೆಗೆ ಮನುಷ್ಯ ಸಂಬಂಧಗಳೂ ಹಳತಾದರೂ ಓ ಎಲ್ ಎಕ್ಸನಲ್ಲಿ ಮಾರಿ ಬಿಡಿ ಎನ್ನುವ ಕಾಲವಿದು ಎನ್ನುವದನ್ನು ಕವಿತೆಗಳು ಧ್ವನಿಸುತ್ತವೆ. ಇಡೀ ಕವನ ಸಂಕಲನದ ಅವಲೋಕನ ನನ್ನ ಸದ್ಯದ ಗುರಿಯಲ್ಲ. ಅವರ ಒಂದು ಕವಿತೆಯನ್ನು ನಿಮ್ಮ ಮುಂದೆ ಚರ್ಚಿಸುವದು ನನ್ನ ಉದ್ದೇಶ. ಕವಿತೆಯ ಹೆಸರು ‘ಮೌನೇಶನೊಂದಿಗೆ ವಾಕಿಂಗ್’. ಇಡೀ ಕವಿತೆ ಹೀಗಿದೆ.
1.
ಈ ಮೌನೇಶ ನನ್ನ ವಾಕಿಂಗ್ ಗೆಳೆಯ
ವಯಸ್ಸು ಇಪ್ಪತ್ತರ ಆಸುಪಾಸಿನಲ್ಲಿರಬಹುದು
ದಿನವೂ ಪಾರ್ಕಿನಲ್ಲಿ ಅದೇ ಜಾಗದಲ್ಲಿ ಕೂರುತ್ತಾನೆ
ಆಚೀಚೆ ನೋಡದ ಮಹಾ ಸಭ್ಯಸ್ಥ!
ಏನಿದ್ದರೂ ಮೋಬೈಲ್ನೊಂದಿಗೆ ಮಾತುಕತೆ
ಕೀಲಿ ಮನೆಯ ಕೀಲಿ ತೆರೆದರೆ ಸಾಕು
ಬೆರಳಿನ ವೇಗವಾಗಿ ಭಾವ, ಮುಖಭಾವ
ಬದಲಾಗುತ್ತಲೇ ಹೋಗುತ್ತದೆ.
ಕಣ್ಣುಗಳ ಕಿಲಕಿಲಿಸಿ ಒಳಗೊಳಗೆ ನಕ್ಕರೆ
(ಸಿಕ್ಕಿರಬಹುದೇನೋ ಸಕ್ಕರೆಯಂಥ ಹುಡುಗಿ?)
ಆಕಾಶದತ್ತ ನೋಡಿ ನಿಡುಸುಯ್ದರೆ...
(ಇರಬಹುದೇನೋ ಯಕ್ಷನಂಥ ವಿರಹಿ?)
ಕೂದಲು ಕಿತ್ತುಕಿತ್ತು ಹಾಕುತ್ತಿದ್ದರೆ
(ನಿಂತಿರಬೂದೇನೋ ಚಿಂತೆ ಸಂತೆಯಲ್ಲಿ?)
ಪ್ರತಿ ಸಲವೂ ಇವನತ್ತ ಹೆಜ್ಜೆ ಹಾಕುವಾಗ
ಒಳಗಿನೊಳಗಿನಲ್ಲಿ ಮಮತೆಯ ಮೌನ ಸಂವಾದ
ದಪ್ ಎಂದು ಹೆಜ್ಜೆ ಇಟ್ಟರೂ, ಕೆಮ್ಮಿದರೂ
ತಿರುಗಿ ನೋಡದ ಈ ಹುಡುಗನ ಕೋಪ ತಾಪ
ಮಾತು ಗೀತು ಸ್ನೇಹ ಗೀಹ ಕೊನೆಗೆ ಜಗಳವೂ
ಕಣ್ಣು ಕೀಲಿಸದ ಕೀಲಿ ಮನೆಯಲ್ಲೇ
2.
ಪ್ರತಿಮನೆಯ ಮೂಲೆಯಲ್ಲಿ, ಕೊಣೆಯಲ್ಲಿ,
ಫುಟ್ ಪಾತಿನಲ್ಲಿ. ಕಾಲೇಜಿನ ಕಾರಿಡಾರಿನಲ್ಲಿ
ತುಂಬಿ ತುಳುಕುತ್ತಿದ್ದಾರೆ ಇಂಥ ಮೌನೇಶರು!
ಡಿಕಿ ಹೊಡೆದರೂ, ಎಡಿ ಬಿದ್ದರೂ ಕತ್ತೆತ್ತದ
ಕೀಲಿ ಮಣೆಯಲ್ಲೇ ಕೀಲಿಸಿದ ಕೀಲುಗೊಂಬೆಗಳು !
ಶಬ್ದ ಸ್ಪರ್ಶ, ರೂಪ, ರಸ, ಗಂಧಕೆ
ಮೊಗದಿರುಹಿದ ‘ಜಂತರ್ ಮಂತರ’ಗಳು
3.
ಒಂಟಿತನದಲಿ ದಿಕ್ಕೆಟ್ಟು ‘ಪ್ರೀತಿ ಕಣ್ಣುಗಳ’
ಅರಸುವ ನಾನು ನನ್ನಂಥ ಮರುಳರು
ಕೊನೆಗೆ ಕೀಲಿವ್ಮಣೆಯಲ್ಲಿ ಮುಂಜಾನೆಯ ಸಂದೇಶ
ಒತ್ತಿ ಕಳಿಸಿ ಕೃತಕೃತ್ಯರಾಗುತ್ತೇವೆ.
ಆಧುನಿಕ ಬದುಕಿನ ಯಥವತ್ತಾದ ಚಿತ್ರಣ ಈ ಕವಿತೆ. ಇಂದು ಯುವ ಜನಾಂಗ ಅಥವಾ ಒಟ್ಟಾರೆ ಜನಾಂಗ ಯಾವ ಪರಿಯಾಗಿ ಮೊಬೈಲ್ ಎಂಬ ಯಂತ್ರಕ್ಕೆ ಸೆರೆಯಾಳಾಗಿದೆ ಎನ್ನುವದನ್ನು ಎಷ್ಟು ಬಣ್ನಿಸಿದರೂ ಸಾಲದು. ಜೊತೆಗೆ ಬದುಕಿನ ಎಲ್ಲ ಮುಖಗಳೂ ಅದರೊಂದಿಗೆ ತಳಕು ಪಡೆದುಕೊಂಡಿವೆ.ನಮ್ಮ ಆಧಾರ್ ಕಾರ್ಡ, ರೇಸನ್ ಕಾರ್ಡ, ಬ್ಯಾಂಕಿನ ವ್ಯವಹಾರ, ಕೊನೆಗೆ ಮಕ್ಕಳ ಶಾಲಾ ಪಾಠ ಪ್ರವಚನಗಳು, ಎಲ್ಲವೂ ಅದರೊಂದಿಗೆ ಕನೆಕ್ಟ ಅಗಿರುವದರಿಂದ ಮೊಬೈಲ್ ಅತ್ಯಾಧುನಿಕ ಜೀವನದ ಅತಿ ಮುಖ್ಯವಾದ ಅಂಗವೇ ಆಗಿದೆ. ಆದರಿದು ಮೋಬೈಲ್ನ ಧನಾತ್ಮಕ ಸ್ವರೂಪ ವಾಯಿತು. ಇಲ್ಲಿ ಕವಿತೆ ಮೊಬೈಲ ನ ಋಣಾತ್ಮಕ ಮುಖದ ಬಗ್ಗೆ ಮಾತಾಡುವಂತಿದೆ. ಎಲ್ಲದಕ್ಕೂ ಎರಡು ಮುಖಗಳಿರುವಂತೆ ಮೋಬೈಲ್ ಗೂ ಎರಡು ಮುಖಗಳಿವೆ. ಅದು ಸಂಬಂದಗಳನ್ನು ಸೇರಿಸುವಂತೆ ಕೌಟುಂಬಿಕ ಸಂಬಂಧಗಳ ಬಿಗಡಾಯಿಸುವಿಕೆಗೂ ಕಾರಣವಾಗಿರುವದು ವಿಪರ್ಯಾಸ. ಇಂದು ಬೆಳೆದ ಮಕ್ಕಳು ಹೇಗೆ ಬಾಹ್ಯ ಸಂಬಂಧಗಳನ್ನು ಕಳೆದುಕೊಂಡು ಅಂತರ್ಮುಖಿಗಳಾಗುತಿದ್ದಾರೆ. ಒಳಗೊಳಗೇ ಹೇಗೆ ಕೊಳೆಯುತ್ತಿದ್ದಾರೆ ಎಂಬುದನ್ನು ಕವಿತೆ ಬಹಳ ವಾಸ್ತವದ ನೆಲೆಯಲ್ಲಿ ಚಿತ್ರಿಸಿದೆ.
ಕವಿತೆಯ ಮೊದಲಾದ ಭಾಗ ವಾಕಿಂಗ್ನಲ್ಲಿ ಬೇಟಿಯಾದ ಹುಡುಗನೊಬ್ಬನ ಚಿತ್ರ ನೀಡುತ್ತಾ ಹೋಗುತ್ತದೆ.
ಹುಡುಗ ಕೆಟ್ಟ ವರ್ತನೆಯವನೇನಲ್ಲ. ಸಂಭಾವಿತನೇ. ದಿನವೂ ಆತ ವಾಕಿಂಗ್ ಬಂದು ಒಂದು ಜಾಗದಲ್ಲಿ ದಿನವೂ ಪಾರ್ಕಿನಲ್ಲಿ ಅದೇ ಜಾಗದಲ್ಲಿ ಕೂರುತ್ತಾನೆ. ಜಾಗವನ್ನೂ ಬದಲಿಸಲಾರ. ಆತನಿಗೆ ಒಂದೆ ಕಡೆಯಲ್ಲಿ ಕೂಡಲೂ ಬೇಸರವಿಲ್ಲ. ಈ ಹುಡುಗ ಮೌನೇಶ ಹೆಸರಿಗೆ ತಕ್ಕಂತೆ ಯಾರೊಡನೆ ಮಾತಾಡುವದಿಲ್ಲ. ಕೊನೆಯ ಪಕ್ಷ ತನ್ನ ಸುತ್ತ ನಡೆಯುವದನ್ನು ಕಣ್ಣೆತ್ತಿಯೂ ನೋಡುವದಿಲ್ಲ. ಸದಾ ತನ್ನ ಮೊಬೈಲ್ ಪರದೆ ನೋಡುತ್ತಲೇ ಕೀಲಿ ಮನೆ ಒತ್ತುತ್ತಲೆ ಅತ ಆಕಡೆಗೆ ಧ್ಯಾನಸ್ಥನಾಗುತ್ತನೆ. ಆ ಕಡೆಯಲ್ಲೂ ಒಬ್ಬ ವ್ಯಕ್ತಿ ಇದ್ದಾರೆ. ಅವರು ಅವನ ಸ್ನೇಹಿತೆ ಆಗಿರಬೇಕು! ಆಕಡೆಯಿಂದ ಬಂದ ಸಂದೇಶಗಳಿಗೆ ಮುಖದಲ್ಲಿ ಹಾವಭಾವ ವ್ಯಕ್ತ ಮಾಡುತ್ತ ಮಗ್ನನಾಗಿರುತ್ತಾನೆ.
ಹೊರ ಜಗತ್ತಿನೊಂದಿಗೆ ಸಂಬಂದವೇ ಇರದ ಆತ ತನ್ನ ಮೋಬೈಲಿನಲ್ಲಿ ಸದಾ ಸಕ್ರಿಯ. ಒಮ್ಮೊಮ್ಮೆ ನಗುತ್ತಾನೆ. ಮಗದೊಮ್ಮೆ ವಿಷಾದಗೊಳ್ಳುತ್ತಾನೆ. ಕೋಪ ತಾಪ ಎಲ್ಲ ಅದರ ಮೇಲೆಯೆ. ಕಣ್ಣುಗಳ ಕಿಲಕಿಲಿಸಿ ಒಳಗೊಳಗೆ ನಕ್ಕರೆ ಆಗ ಅವನನ್ನು ನೋಡುತ್ತಿದ್ದ ಕವಯಿತ್ರಿಗೆ ಆತನಿಗೆ ಸಕ್ಕರೆಯಂಥಹ ಹುಡುಗಿ ಸಿಕ್ಕಿರಬೆಕು ಎನಿಸುತ್ತದೆ. ಅಥವಾ ಆತ ಒಂದು ತರಹದ ಬೇಸರದಲ್ಲಿ ಆಕಾಶದತ್ತ ನೋಡಿದರೆ ಆತನ ಮನದಲ್ಲಿ ವಿರಹ ತುಂಬಿರಬಹುದೆನೋ ಎನಿಸುತ್ತದೆ. ಅವನು ತುಂಬ ತಲ್ಲಣದಲ್ಲಿ ಕೂದಲು ಕಿತ್ತುತ್ತಿದ್ದರೆ ಚಿಂತೆ ಅವನನ್ನು ದಹಿಸುತ್ತಿರಬಹುದೆನಿಸುತ್ತದೆ. ಹೀಗೆ ಅವನ ಹತ್ತಿರ ಪ್ರತಿ ಸಲ ಹೋದಾಗಲೂ ಕವಿಯತ್ರಿಗೆ ಅವನಲ್ಲಿ ಒಂದುಮಮತೆಯ ಸಂವಾದ ನಡೆದಿರುವದನ್ನು ಅರಿವಿಗೆ ಬರುತ್ತದೆ. ಅವನ್ನು ಮಾತನಾಡಿಸಲೆಂದೆ ಕವಯಿತ್ರಿ ಕೆಮ್ಮುತ್ತಾಳೆ.ದಪ್ಪ ಅಂತ ಏನನ್ನೊ ಒಂದನ್ನು ಒಗೆಯುತ್ತಾಳೆ ಆದರೆ ಆತ ಲಕ್ಷ್ಯಕೊಡದೆ ತನ್ನ ಜಗತ್ತಲ್ಲಿಯೇ ಮುಳುಗಿದ್ದಾನೆ. ಆಗ ಕವಿಯತ್ರಿ
ದಪ್ ಎಂದು ಹೆಜ್ಜೆ ಇಟ್ಟರೂ, ಕೆಮ್ಮಿದರೂ
ತಿರುಗಿ ನೋಡದ ಈ ಹುಡುಗನ ಕೋಪ ತಾಪ
ಮಾತು ಗೀತು ಸ್ನೇಹ ಗೀಹ ಕೊನೆಗೆ ಜಗಳವೂ
ಕಣ್ಣು ಕೀಲಿಸದ ಕೀಲಿ ಮನೆಯಲ್ಲೇ
ಹೀಗೆ ಆತ ಗಾಢವಾಗಿ ಮುಳುಗಿರುವ ರೀತಿಗೆ ವಿಸ್ಮಯ ಗೊಳ್ಳುತ್ತಾಳೆ. ಇಲ್ಲಿಗೆ ಮೊದಲ ಭಾಗದ ಕವಿತೆ ಮುಗಿಯುತ್ತದೆ ಅಲ್ಲಿಂದ ಕವಿತೆ ವಿಸ್ತಾರ ಚಿಂತನೆಗೆ ಜಿಗಿಯು ತ್ತದೆ.. ಇದು ಒಬ್ಬ ಮೌನೇಶನ ಕಥೆಯೆ? ಇಂತಹ ಮೌನೇಶರು ಬೇರೆ ಕಡೆ ಇಲ್ಲವೇ? ಎಂಬ ಪ್ರಶ್ನೆಗಳನ್ನು ಕವಿತೆ ಎತ್ತುತ್ತದೆ. ಅಯ್ಯೊ ಇಙದು ಎಲ್ಕಿ ನೋಡಿದರಲ್ಲಿ ಇಂತಹ ಮೌನೇಶರು ಸಿಗುತ್ತಾರೆ. ಅಥವಾ ನಾವೂ ಮೌನೇಶರೇ ಆಗಿದ್ದೇವೆ. ಕವಿತೆ
ಪ್ರತಿ ಮನೆಯ ಮೂಲೆಯಲ್ಲಿ, ಕೊಣೆಯಲ್ಲಿ,
ಫುಟ್ ಪಾತಿನಲ್ಲಿ. ಕಾಲೇಜಿನ ಕಾರಿಡಾರಿನಲ್ಲಿ
ತುಂಬಿ ತುಳುಕುತ್ತಿದ್ದಾರೆ ಇಂಥ ಮೌನೇಶರು!
ಡಿಕ್ಕಿ ಹೊಡೆದರೂ, ಎಡವಿ ಬಿದ್ದರೂ ಕತ್ತೆತ್ತದ
ಕೀಲಿಮಣೆಯಲ್ಲೇ ಕೀಲಿಸಿದ ಕೀಲುಗೊಂಬೆಗಳು
ಶಬ್ದ ಸ್ಪರ್ಶ, ರೂಪ, ರಸ, ಗಂಧಕೆ
ಮೊಗದಿರುಹಿದ ‘ಜಂತರ್ ಮಂತರ’ಗಳು
ಹೀಗೆ ಅವರ ಇರುವಿಕೆಯನ್ನು ಅವರ ಶರಣಾಗತ ಮನಸ್ತಿತಿಯನ್ನು ಬಣ್ಣಿಸುತ್ತಾರೆ. ಪ್ರತಿ ಕೋಣೆಯ ಮೂಲೆಯಲ್ಲೊ ಕಾರಿಡಾರಿನಲ್ಲೊ ಇರುವ ಅವರು ಎಷ್ಟು ಮಗ್ನರಾಗಿದ್ಸಾರೆ ಎಂದರೆ ನೀವು ಅವರಿಗೆ ಡಿಕ್ಕಿ ಹೊಡೆದರೂ ಅವರು ನಿಮ್ಮನ್ನು ಕಣ್ಣೆತ್ತಿ ನೋಡುವದಿಲ್ಲ. ತಮ್ಮ ತಮ್ಮ ಮೊಬೈಲಿನ ಕಿಲಿಮಣೆಯ ಕುಟ್ಟುವಿಕೆಯಲ್ಕಿ ಅಥವಾ ಪರದೆಯ ಸರಿಸುವಿಕೆಯಲ್ಲಿ ಮಗ್ನರಾಗಿರುತ್ತಾರೆ.ಅವರಿಗೆ ಪಂಚೇಂದ್ರಿಯಗಳೂ ಸ್ತಬ್ದವಾಗಿರುತ್ತವೆ.ಹೊರ ಜಗತ್ತಿನ ಶಬ್ದ, ರೂಪ, ರಸ, ಗಂಧ ಇವಾವವು ಅವರನ್ನು ತಟ್ಟುವದಿಲ್ಲ. ಅಂತೆಯೆ ಅವರನ್ನು ಈ ಪಂಚ ಆಸಕ್ತಿಗಳಿಗೆ ಮೊಗದಿರುಹಿದ "ಜಂತರ್ ಮಂತರ್" ಗೊಂಬೆಗಳು ಎನ್ನುತ್ತಾರೆ.
ಕವಿತೆಯ ಮೂರನೆಯ ಭಾಗ ಈವರೆಗೆ ಮೂಕ ಓದುಗರಾಗಿದ್ದ ನಮ್ಮನ್ನು ಕವಿತೆಯೊಳಗಡೆ ಎಳೆದೊಯ್ಯತ್ತದೆ.
ಒಂಟಿತನದಲಿ ದಿಕ್ಕೆಟ್ಟು ‘ಪ್ರೀತಿ ಕಣ್ಣುಗಳ’
ಅರಸುವ ನಾನು ನನ್ನಂಥ ಮರುಳರು
ಕೊನೆಗೆ ಕೀಲಿಮಣೆಯಲ್ಲಿ ಮುಂಜಾನೆಯ ಸಂದೇಶ
ಒತ್ತಿ ಕಳಿಸಿ ಕೃತಕೃತ್ಯರಾಗುತ್ತೇವೆ.
ಮೊಬೈಲ್ ಒಂಟಿ ಭಾವದಿಂದ ಬಳಲುವ ಪ್ರತೊ ಎದೆಗೂ ಎಲ್ಲೊ ಒಂದು ಜೀವ ನಿಮಗಾಗಿ ಕಾದಿದೆ ಎಂಬ ಭರವಸೆಯನ್ನು ತಙದಿತದತಿದೆ. ನಮ್ಮ ನೋವಿಗೆ, ನಮ್ಮ ಒಂಟಿಯಕತನಕ್ಕೆ ಎಲ್ಲೊ ಒಂದು ಜೀವ ಮಿಡಿಯುತ್ತದೆ ಎಂಬ ನಂಬಿಕೆಯಿಂದ ನಾವೂ ಆ ಹುಡುಗನಷ್ಟಲ್ಲದಿದ್ದರೂ ತುಸುವಾದರೂ ಸಂಭ್ರಮ ಪಟ್ಟು ಯಾರದೋ ಕರೆಗೆಸಂದೇಶ ಕಳಿಸಿ ಮನ ನೆಮ್ಮದಿಯಿಂದಿರುವಂತೆ ನೋಡಿಕೊಳ್ಳುತ್ತೆವೆ.
ಮಧ್ಯ ವಯಸ್ಸಿನ ಮಹಿಳೆ ಮತ್ತು ಇಪ್ಪತ್ತರ ಯುವಕನ ಸ್ನೇಹದ ಕಥೆಯಾದ ಕವಿತೆಯದು. ಅದು ಸ್ನೇಹವೇ ಅಲ್ಲ. ಆ ಹುಡುಗನ ವರ್ತನೆಯನ್ನು ಅಭ್ಯಸಿಸಲು ಕವಿಯತ್ರಿ ಹಾಕುವ ಪೀಠಿಕೆ ಅದು ಎಂಬುದು ಮೊದಲ ಓದಿಗೇ ಹೊಳೆದು ಬಿಡುತ್ತದೆ. ಒಟ್ಟಾರೆ ಆಧುನಿಕ ಜೀವನದ ತಲ್ಲಣಳನ್ನು ಹಿಡಿದಿಟ್ಟಿದೆ. ಇಂತಹ ಹಲವು ಹೊಸ ಬದುಕಿನ ತಲ್ಲಣ ಚಿತ್ರಿಸುವ ಕವಿತೆಗಳು ಇಲ್ಲಿವೆ.
- ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ
ಮೊ. 9731970857
- * * * -